ಪೂರ್ವ ದೆಹಲಿ ನಿವಾಸಿ 23 ವರ್ಷದ ತುಷಾರ್ ಸಿಂಗ್ ಬಿಷ್ತ್ ಎಂಬ ಯುವಕ ತನ್ನನ್ನು ತಾನು ಅಮೆರಿಕದ ಮಾಡೆಲ್ ಎಂದು ಹೇಳಿಕೊಂಡು ಭಾರತದ ಬರೊಬ್ಬರಿ 700ಕ್ಕೂ ಅಧಿಕ ಮಹಿಳೆಯರು ಮತ್ತು ಯುವತಿಯರಿಗೆ ವಂಚಿಸಿದ್ದಾನೆ.
ಪೊಲೀಸ್ ಮೂಲಗಳ ಪ್ರಕಾರ ಈತ ಖ್ಯಾತ ಡೇಟಿಂಗ್ ಅಪ್ಲಿಕೇಶನ್‌ಗಳು ಮತ್ತು ವರ್ಚುವಲ್ ಮೊಬೈಲ್ ಸಂಖ್ಯೆಗಳ ಸಹಾಯದಿಂದ 700ಕ್ಕೂ ಅಧಿಕ ಹುಡುಗಿಯರು ಮತ್ತು ಮಹಿಳೆಯರನ್ನು ಬಲೆಗೆ ಬೀಳಿಸಿಕೊಂಡು ಅವರಿಗೆ ವಂಚಿಸಿದ್ದಾನೆ.ಆರೋಪಿಯು ತಾನು ವಿದೇಶಿ ಫ್ರೀಲಾನ್ಸ್ ಮಾಡೆಲ್ ಎಂದು ಬರೆದುಕೊಂಡು ನಕಲಿ ಐಡಿ ಸೃಷ್ಟಿಸಿಕೊಂಡಿದ್ದ. ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆ ಸೃಷ್ಟಿಸಿಕೊಂಡು ಅದಕ್ಕೆ ಬ್ರೆಜಿಲ್ ಮೂಲದ ಮಾಡೆಲ್ ಓರ್ವನ ಫೋಟೋಗಳನ್ನು ಪ್ರೊಫೈಲ್ ಫೋಟವಾಗಿ ಹಾಕಿ ಹುಡುಗಿಯರು ಮತ್ತು ಯುವಕಿಯರನ್ನು ವಂಚಿಸುತ್ತಿದ್ದ. ಮೊದಲು ಸಾಮಾಜಿಕ ಜಾಲತಾಣಗಳು ಮತ್ತು ಡೇಟಿಂಗ್ ಆಯಪ್ ಗಳಲ್ಲಿ ಹುಡುಗಿಯರು ಮತ್ತು ಮಹಿಳೆಯರ ಸ್ನೇಹ ಬೆಳೆಸುತ್ತಿದ್ದ. ತಾನು ಪ್ರಾಜೆಕ್ಟ್‌ಗಾಗಿ ಭಾರತಕ್ಕೆ ಬಂದಿದ್ದೇನೆ.
ಶೀಘ್ರದಲ್ಲೇ ಸ್ವದೇಶಕ್ಕೆ ಮರಳುತ್ತೇನೆ. ನೀವು ಸುಂದರವಾಗಿದ್ದೀರಿ.. ನಿಮ್ಮನ್ನು ಮದುವೆಯಾಗುತ್ತೇನೆ ಎಂದು ಹೇಳಿ ಈತ ಕ್ರಮೇಣ ಅವರೊಂದಿಗೆ ಆತ್ಮೀಯ ಸಲುಗೆ ಬೆಳೆಸಿಕೊಂಡು ಅವರಿಂದ ಅವರ ಖಾಸಗಿ ಫೋಟೋಗಳು ಮತ್ತು ವಿಡಿಯೋಗಳನ್ನು ತನಗೆ ಕಳುಹಿಸುವಂತೆ ಕೇಳುತ್ತಿದ್ದ. ಆತನನ್ನು ನಂಬಿದ ಯುವತಿಯರು ಮತ್ತು ಮಹಿಳೆಯರು ಆತನಿಗೆ ವಿಡಿಯೋ ಮತ್ತು ಫೋಟೋ ಕಳುಹಿಸಿದರೆ ಅದನ್ನೇ ಇಟ್ಟುಕೊಂಡು ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಸಿ ಅವರಿಂದ ಸಾಧ್ಯವಾದಷ್ಟೂ ಹಣ ಪೀಕುತ್ತಿದ್ದ ಎನ್ನಲಾಗಿದೆ.
ಪೊಲೀಸ್ ಮೂಲಗಳ ಪ್ರಕಾರ ಈ ಆರೋಪಿಯು ವರ್ಚುವಲ್ ಅಂತರಾಷ್ಟ್ರೀಯ ಮೊಬೈಲ್ ಸಂಖ್ಯೆಯನ್ನು ಸಹ ಪಡೆದುಕೊಂಡಿದ್ದು, ಅದನ್ನು ಬಳಸಿಕೊಂಡು ಅವರು ಬಂಬಲ್, ಸ್ನ್ಯಾಪ್‌ಚಾಟ್ ಮತ್ತು ಇತರ ಅಪ್ಲಿಕೇಶನ್‌ಗಳಲ್ಲಿ ನಕಲಿ ಪ್ರೊಫೈಲ್‌ಗಳನ್ನು ರಚಿಸಿ ಯುವತಿಯರು ಮತ್ತು ಮಹಿಳೆಯರ ಸ್ನೇಹ ಬೆಳೆಸಿ ವಂಚಿಸುತ್ತಿದ್ದ. ಈಗ್ಗೆ ಡಿಸೆಂಬರ್ 13, 2024 ರಂದು ಪಶ್ಚಿಮ ಜಿಲ್ಲೆಯ ಸೈಬರ್ ಪೊಲೀಸ್ ಠಾಣೆಯಲ್ಲಿ ದೆಹಲಿ ವಿಶ್ವವಿದ್ಯಾಲಯದ ಎರಡನೇ ವರ್ಷದ ಪದವಿ ವಿದ್ಯಾರ್ಥಿನಿ ದೂರು ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಈತನನ್ನು ಬಂಧಿಸಿದ್ದಾರೆ
ದೂರಿನಲ್ಲಿ ತನ್ನ ಸ್ನೇಹ ಬೆಳೆಸಿ, ಬಳಿಕ ತನ್ನನ್ನು ಪ್ರೀತಿಸುವುದಾಗಿ ಹೇಳಿ ತನ್ನ ಖಾಸಗಿ ಫೋಟೋಗಳನ್ನು ಮತ್ತ ವಿಡಿಯೋಗಳನ್ನು ಕಳುಹಿಸಿಕೊಂಡಿದ್ದಾನೆ. ಬಳಿಕ ಅದೇ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಸಿ ತನ್ನಿಂದ ಅಪಾರ ಪ್ರಮಾಣದ ಹಣ ಪಡೆದಿದ್ದಾನೆ. ಅಲ್ಲದೆ ಇನ್ನೂ ಹಣ ಬೇಕು ಎಂದು ಒತ್ತಾಸಿದ್ದು ಹೀಗಾಗಿ ಬೇರೆ ಮಾರ್ಗವಿಲ್ಲದೇ ದೂರು ನೀಡುತ್ತಿರುವುದಾಗಿ ವಿದ್ಯಾರ್ಥಿನಿ ಅಳಲು ತೋಡಿಕೊಂಡಿದ್ದಾರೆ.
ಆಕೆ ನೀಡಿದ ದೂರಿನ ಆಧಾರದ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಕೊನೆಗೂ ಆರೋಪಿ ತುಷಾರ್ ಬಿಷ್ತ್ ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ವಿಚಾರಣೆ ವೇಳೆ ಆತ ಈಕೆಯ ರೀತಿ ಸುಮಾರು 700ಕ್ಕೂ ಅಧಿಕ ಮಹಿಳೆಯರು ಮತ್ತು ಯುವತಿಯರಿಗೆ ವಂಚಿಸಿರುವ ಕುರಿತು ಸ್ಫೋಟಕ ಮಾಹಿತಿ ಬಾಯಿಬಿಟ್ಟಿದ್ದಾನೆ. ಅಲ್ಲದೆ ಪೊಲೀಸರು ಈತನ ಮೊಬೈಲ್ ಫೋನ್ ಮತ್ತು ಅಪ್ಲಿಕೇಶನ್ ಆಧಾರಿತ ವರ್ಚುವಲ್ ಇಂಟರ್ನ್ಯಾಷನಲ್ ಮೊಬೈಲ್ ಸಂಖ್ಯೆ ಮತ್ತು ವಿವಿಧ ಬ್ಯಾಂಕ್‌ಗಳ 13 ಕ್ರೆಡಿಟ್ ಕಾರ್ಡ್‌ಗಳನ್ನು ವಶಪಡಿಸಿಕೊಂಡಿದ್ದಾರೆ.