ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ (ಪೆರಿಫೆರಲ್ ರಿಂಗ್ ರೋಡ್)ಗಾಗಿ ಭೂ ಸ್ವಾಧೀನಪಡಿಸಿಕೊಳ್ಳುವ ಜನರಿಗೆ ಭೂಸ್ವಾಧೀನ ಕಾಯ್ದೆಯಡಿ ನೀಡಲಾಗುತ್ತಿರುವ ಪರಿಹಾರಕ್ಕಿಂತ ಹೆಚ್ಚಿನ ಪರಿಹಾರವನ್ನು ನೀಡುವ ಮಾರ್ಪಡಿಸಿದ ಆದೇಶಕ್ಕೆ ರಾಜ್ಯ ಸಚಿವ ಸಂಪುಟ ಗುರುವಾರ ಅನುಮೋದನೆ ನೀಡಿದೆ.ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ದಿನಾಂಕ: 19.09.2024 ರಂದು ಸಲ್ಲಿಸಿರುವ ಪ್ರಸ್ತಾವನೆಯನ್ವಯ ಈಗಾಗಲೇ ದಿನಾಂಕ: 12.09.2024 ರಂದು ಹೊರಡಿಸಿರುವ ಸರ್ಕಾರಿ ಆದೇಶದ ಭಾಗ ಕ್ರಮ ಸಂಖ್ಯೆ (3)ರ ಅಂಶವನ್ನು ರದ್ದುಪಡಿಸಿ ತಿದ್ದುಪಡಿ ಆದೇಶವನ್ನು ಹೊರಡಿಸಿರುವ ಕ್ರಮಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ.ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ (ಪೆರಿಫೆರಲ್ ರಿಂಗ್ ರಸ್ತೆ)ನ ಯೋಜನೆಯಲ್ಲಿ ಒಳಗೊಂಡಿರುವ ಗ್ರಾಮಗಳ ಜಮೀನಿನ ಮಾರ್ಗಸೂಚಿ ದರಗಳು ವಿಭಿನ್ನವಾಗಿರುವುದರಿಂದ ಭೂ ಸ್ವಾಧೀನ ಪಡಿಸಿಕೊಳ್ಳುವ ಜಮೀನಿನ ಭೂಮಾಲೀಕರಿಗೆ ಆಯಾ ಗ್ರಾಮವಾರು ಮಾರ್ಗಸೂಚಿ ದರವನ್ನುಗಮನದಲ್ಲಿರಿಸಿಕೊಂಡು ಸಂಧಾನ ಸೂತ್ರ (ಸಂಧಾನಿತ ಮೊತ್ತ)ದ ಮೂಲಕ ಭೂಸ್ವಾಧೀನ ಕಾಯ್ದೆ 1894ರ ಅಡಿ ನಿಗಧಿಪಡಿಸಬಹುದಾದ ಭೂಪರಿಹಾರ ಮೊತ್ತಕ್ಕಿಂತ ಹೆಚ್ಚಿನ ಪರಿಹಾರ ಮೊತ್ತವನ್ನು ನಿಗಧಿಪಡಿಸಲು ಅಥವಾ ಭೂಮಾಲೀಕರು ಒಪ್ಪಿದಲ್ಲಿ ಟಿ.ಡಿ.ಆರ್ ನೀಡಲು ಸಂಪುಟ ನಿರ್ಧರಿಸಿದೆ.