![](https://safgroup.in/wp-content/uploads/2024/10/1001676900.jpg)
ಹೀಗಾಗಿ ದಸ್ತಾವೇಜು ನೋಂದಣಿ ಸೇವೆಯನ್ನೇ ಸ್ಥಗಿತ ಮಾಡಲು ನಿರ್ಧರಿಸಿದ್ದಾರೆ. ಈಗಾಗಲೇ ಬಹುತೇಕ ಕಡೆ ಹೊಸ ನೋಂದಣಿ ನಡೆದಿಲ್ಲ. ಕಾವೇರಿ 2.0ರಲ್ಲಿ ಅರ್ಜಿ ಸ್ವೀಕರಿಸಿ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಪಡೆದಿದ್ದ ದಸ್ತಾವೇಜುಗಳ ನೋಂದಣಿ ಪೂರ್ಣಗೊಳಿಸಲಾಗಿದೆ. ಹೀಗಾಗಿ ಪ್ರತಿದಿನ 10 ಸಾವಿರ ರಿಜಿಸ್ಟ್ರೇಷನ್ ನಡೆಯುತ್ತಿದ್ದ ಕಡೆ ಸೋಮವಾರ 6,120 ಮತ್ತು ಮಂಗಳವಾರ 2,036 ದಸ್ತಾವೇಜುಗಳಷ್ಟೇ ನೋಂದಣಿ ಆಗಿವೆ. ಇನ್ಮುಂದೆ ಹೊಸ ದಸ್ತಾವೇಜು ಸ್ವೀಕರಿಸದೆ ಇರಲು ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖಾ ನೌಕರರ ಸಂಘ ನಿರ್ಧರಿಸಿದೆ. ಬುಧವಾರ ಕಂದಾಯ ಇಲಾಖೆ (ನೋಂದಣಿ ಮತ್ತು ವಿಪತ್ತು ನಿರ್ವಹಣೆ) ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ. ಯಾವ ನೋಂದಣಿಗೆ ಯಾವ ದಾಖಲೆ ಪಡೆಯಬೇಕೆಂದು ಮಾರ್ಗಸೂಚಿ ಹೊರಡಿಸಬೇಕೆಂದು ಮನವಿ ಸಲ್ಲಿಸಿ ಅನಿರ್ದಿಷ್ಠಾವಧಿವರೆಗೂ ರಿಜಿಸ್ಟ್ರೇಷನ್ ನಿಲ್ಲಿಸಲು ಸಂಘ ನಿರ್ಧರಿಸಿದೆ ಎನ್ನಲಾಗಿದೆ.
ಕೇಂದ್ರ ನೋಂದಣಿ ಕಾಯ್ದೆ 1908ರ ಕರ್ನಾಟಕ ನೋಂದಣಿ ನಿಯಮಾವಳಿ 1965ರ 22-ಬಿ, 22-ಸಿ ಮತ್ತು 22-ಡಿಗೆ ತಿದ್ದುಪಡಿ ತರಲಾಗುತ್ತಿದೆ. ಕಾಯ್ದೆ 22ಬಿ ಪ್ರಕಾರ ತಿರುಚಿದ ದಾಖಲೆ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಯಾವುದೇ ಕಾಯ್ದೆಗೆ ವಿರುದ್ಧವಾಗಿ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಶದಲ್ಲಿನ ಸ್ಥಿರಾಸ್ತಿ ನೋಂದಣಿ ಮಾಡಿದರೆ ಜಿಲ್ಲಾ ನೋಂದಣಾಧಿಕಾರಿ ರದ್ದುಪಡಿಸುವ ಅಧಿಕಾರ ನೀಡಲಾಗಿದೆ. ಕಾಯ್ದೆ-81ಎ ಪ್ರಕಾರ ದಸ್ತಾವೇಜು ನೋಂದಣಿ ಮಾಡಿದ ಸಬ್ರಿಜಿಸ್ಟ್ರಾರ್ಗೆ 3 ವರ್ಷ ಜೈಲು ಶಿಕ್ಷೆ ವಿಧಿಸಲು ಅವಕಾಶ ನೀಡಲಾಗಿದೆ. ಇದು ಸಬ್ರಿಜಿಸ್ಟ್ರಾರ್ಗಳಲ್ಲಿ ಗೊಂದಲ ಮತ್ತು ಆತಂಕಕ್ಕೆ ಕಾರಣವಾಗಿದೆ.ಇಲ್ಲಿಯವರೆಗೂ ಕೇಂದ್ರ ನೋಂದಣಿ ಕಾಯ್ದೆ 1908ರಲ್ಲಿ ನೋಂದಣಿ ಮತ್ತು ಮುದ್ರಾಂಕ ಶುಲ್ಕ ವಸೂಲಿ ಮಾಡುವ ಅಧಿಕಾರವಿತ್ತು. ದಾಖಲೆ ನೈಜತೆ ಪರೀಕ್ಷಿಸುವ ಅಧಿಕಾರ ಇರಲಿಲ್ಲ. ರಾಜ್ಯದ 260 ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ದಿನಕ್ಕೆ ಅಂದಾಜು 10 ಸಾವಿರ ದಾಖಲೆ ಪತ್ರಗಳು ನೋಂದಣಿ ಆಗುತ್ತಿವೆ. ಕೃಷಿ ಭೂಮಿ, ವಿಲ್ಲಾ, ಸೈಟು, ಮನೆ, ಕಟ್ಟಡ ಸೇರಿದಂತೆ ಸ್ಥಿರಾಸ್ತಿಗಳ ಕ್ರಯ, ದಾನ ಪತ್ರ, ವಿಭಾಗ ಪತ್ರ, ಹಕ್ಕು ಬಿಡುಗಡೆ ಮತ್ತು ಕರಾರು ಪತ್ರಗಳ, ಬಾಡಿಗೆ ಕರಾರು ನೋಂದಣಿ ಆಗುತ್ತಿವೆ. ಈಗಾಗಲೇ ಕಾವೇರಿ 2.0ಕ್ಕೆ ಅಪ್ಗ್ರೇಡ್ ಮಾಡಿ ಎನಿವೇರ್ ರಿಜಿಸ್ಟ್ರೇಷನ್, ಫೇಸ್ಲೆಸ್ ರಿಜಿಸ್ಟ್ರೇಷನ್ ಮತ್ತು ಭೂಮಿ, ಇ-ಸ್ವತ್ತು, ಇ-ಆಸ್ತಿ, ಫ್ರೂಟ್ಸ್, ಬಿಡಿಎಗೆ ಸಂಯೋಜನೆ ಮಾಡಲಾಗಿದೆ.ಸಿಟಿಜನ್ ಲಾಗಿನ್ನಲ್ಲಿ ಪಕ್ಷಕಾರರು ಸಲ್ಲಿಸುವ ದಸ್ತಾವೇಜು, ನಕಲು ಪ್ರತಿ ಪಡೆದು ನೋಂದಣಿಗೆ ಸೂಚಿಸಿದೆ. ಸ್ಪಷ್ಟ ಮಾರ್ಗಸೂಚಿ ನೀಡಿಲ್ಲ. ಆಧಾರ್ ಒಟಿಪಿ ಕಡ್ಡಾಯ ಮಾಡಿದ್ದರೂ, ಆಸ್ತಿಗೆ ಆಧಾರ್ ಲಿಂಕ್ ಮಾಡಿಲ್ಲ. ಒಟಿಪಿ ಪಡೆಯುವುದು ಪ್ರಯೋಜನವಿಲ್ಲ. ಜತೆಗೆ ಪಾನ್, ಪಾಸ್ಪೋರ್ಟ್ ಸಹ ಅವಕಾಶ ನೀಡಿದ್ದರಿಂದಾಗಿ ಶೇ.40 ಜನ ಆಧಾರ್ ಬಳಸುತ್ತಿಲ್ಲ. ಇಷ್ಟರ ನಡುವೆ ನಕಲಿ ಐಡಿ ಕಾರ್ಡ್ ದಂಧೆಗೆ ಕಡಿವಾಣ ಬಿದ್ದಿಲ್ಲ. ಗುರುತಿನ ಚೀಟಿ ಅಸಲಿತನ ಪರೀಕ್ಷೆಗೆ ಉಪ ನೋಂದಣಿ ಕಚೇರಿಯಲ್ಲಿ ಕಾನೂನಿನಡಿ ಯಾವುದೇ ಸೌಲಭ್ಯ ಇಲ್ಲವೆಂಬುದು ಅಧಿಕಾರಿಗಳ ವಾದವಾಗಿದೆ.ಇಲ್ಲಿ ಯಾರಿಗೆ ಶಿಕ್ಷೆ ?: ಬಿಬಿಎಂಪಿಯಲ್ಲಿ 2015ರಿಂದ 2023ವರೆಗೆ 45,133 ಆಸ್ತಿಗಳ ವಾರಸುದಾರರು ಬಿ ಖಾತಾ ಬದಲು ಎ ಖಾತಾ ಪಡೆದಿದ್ದಾರೆ. ಇ-ಸ್ವತ್ತು ತಂತ್ರಾಂಶದಲ್ಲಿ ನಕಲಿ ದಾಖಲೆ ಸಲ್ಲಿಸಿ ರೆವಿನ್ಯೂ ಸೈಟ್ಗೆ ಇ-ಖಾತಾ ಪಡೆದ ಪ್ರಕರಣ ಸಿಐಡಿ ತನಿಖೆ ಹಂತದಲ್ಲಿದೆ. ಸರ್ಕಾರಿ ಭೂಮಿಗೆ ಪಹಣಿ ತಿರುಚಿ ರಿಜಿಸ್ಟ್ರೇಷನ್ಗೆ ಬರುತ್ತಾರೆ. ಕಾವೇರಿ 2.0ಕ್ಕೆ ಭೂಮಿ, ಇ-ಸ್ವತ್ತು ಮತ್ತು ಇ-ಆಸ್ತಿಗೆ ಸಂಯೋಜನೆ ಆಗಿರುವ ಹಿನ್ನೆಲೆ ನೋಂದಣಿ ಮಾಡಲಾಗುತ್ತದೆ. ಅದೇ ಹೆಸರಿನ ಆಧಾರ್ ಇರುವ ವ್ಯಕ್ತಿಯನ್ನು ಕರೆತಂದು ನೋಂದಣಿ ಮಾಡಲಾಗುತ್ತಿದೆ. ಇಂತಹ ಸನ್ನಿವೇಶದಲ್ಲಿ ದಾಖಲೆಗಳ ಸಾಚಾತನ ಪರೀಕ್ಷೆ ಮಾಡುವುದು ಹೇಗೆ ಎಂಬುದು ಅಧಿಕಾರಿಗಳ ಪ್ರಶ್ನೆಯಾಗಿದೆ.23 ದಿನ ಮುಚ್ಚಿಟ್ಟ ದಾಖಲೆಗೆ ಆಕ್ರೋಶ: ಪ್ರಧಾನ ಕಾರ್ಯದರ್ಶಿ ಸೆ.30ರಂದು ಅಧಿಕಾರಿಗಳ ವರ್ಗಾವಣೆಗೆ ನಡಾವಳಿ ಸಿದ್ದಪಡಿಸಿ ಅ.22ರಂದು ಇ-ಮೇಲ್ ಮೂಲಕ ರವಾನಿಸಿದ್ದಾರೆ. ಅಂದರೆ, 23 ದಿನ ಮುಚ್ಚಿಟ್ಟು, ದಿಢೀರ್ ಹೊರಡಿಸಲಾಗಿದೆ. ಇದೇ ರೀತಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಆದೇಶಗಳನ್ನು ಮರೆಮಾಚಿದರೆ, ನಮ್ಮ ಮೇಲೆ ದುಷ್ಪರಿಣಾಮ ಬೀರಲಿದೆ. ಹಾಗಾಗಿ ಮಾರ್ಗಸೂಚಿ ಹೊರಡಿಸಿದ ಮೇಲಷ್ಟೇ ರಿಜಿಸ್ಟ್ರೇಷನ್ ಮಾಡುವುದಾಗಿ ನೋಂದಣಾಧಿಕಾರಿಗಳು ಪಟ್ಟು ಹಿಡಿದಿದ್ದಾರೆ.ಮದ್ರಾಸ್ ಹೈಕೋರ್ಟ್ನಲ್ಲಿ ರದ್ದು: ಕೇಂದ್ರ ನೋಂದಣಿ ಕಾಯ್ದೆ 1908ಕ್ಕೆ 2021ರಲ್ಲಿ ತಮಿಳುನಾಡು ಸರ್ಕಾರ ತಿದ್ದುಪಡಿ ತಂದು ಜಾರಿಗೆ ತಂದಿತ್ತು. ಇದೇ ಮಾದರಿ ರಾಜ್ಯದಲ್ಲೂ ಜಾರಿಗೆ ತರಲಾಗಿದೆ. ಕಾಯ್ದೆ ತಿದ್ದುಪಡಿ ಪ್ರಶ್ನಿಸಿ ಮದ್ರಾಸ್ ಹೈಕೋರ್ಟ್ನಲ್ಲಿ 200 ರಿಟ್ ಅರ್ಜಿಗಳು ಸಲ್ಲಿಕೆಯಾಗಿದ್ದವು. ವಿಚಾರಣೆ ನಡೆಸಿದ ವಿಭಾಗೀಯಪೀಠ, ಈ ತಿದ್ದುಪಡಿಯು ನ್ಯಾಯಾಂಗಕ್ಕೆ ಸಮಾನಾಂತರ ವೇದಿಕೆ ರಚಿಸಲು ಪ್ರಯತ್ನಿಸಿದೆ. ಕಾರ್ಯಾಂಗಕ್ಕೆ ಅನಗತ್ಯ ಅಧಿಕಾರ ನೀಡಿದೆ ಎಂಬ ಅಭಿಪ್ರಾಯಪಟ್ಟು ತಿದ್ದುಪಡಿಯನ್ನು ಸಂವಿಧಾನ ವಿರೋಧಿ ಎಂದು ತೀರ್ಪು ನೀಡಿದೆ.ಈ ದಾಖಲೆ ಕೇಳಿದರೂ ಆಶ್ಚರ್ಯ ಇಲ್ಲ: ಸ್ಥಿರಾಸ್ತಿ ನೋಂದಣಿಗೆ ಪಕ್ಷಕಾರರು ಆಧಾರ್, ಪಾನ್, ಅಸಲಿ ಕ್ರಯ ಪತ್ರ, ಋಣಭಾರ ಪ್ರಮಾಣ ಪತ್ರ (ಇಸಿ), ಖಾತಾ ಪ್ರಮಾಣಪತ್ರ (ಪಂಚಾಯಿತಿ, ಬಿಬಿಎಂಪಿ, ಸ್ಥಳೀಯ ಸಂಸ್ಥೆಗಳು ಮ್ಯುಟೇಷನ್), ಭೂಮಿ ಮಾಲೀಕತ್ವದ ಸರ್ಟಿಫಿಕೇಟ್, ಗ್ರಾಮದ ನಕ್ಷೆ, ಕಂದಾಯ ನಕ್ಷೆ, ಅನುಮೋದಿತ ಬಡಾವಣೆಗೆ ಸಕ್ಷಮ ಪ್ರಾಧಿಕಾರದಿಂದ ಪ್ರಮಾಣ ಪತ್ರ, ಆಕಾರಬಂದ್ ಮತ್ತು ಸರ್ವೆ ದಾಖಲೆ, ಪಿಟಿಸಿಎಲ್ ಕಾಯ್ದೆಗೆ ಒಳಪಡುವುದಿಲ್ಲ ಎಂಬ ನಿರಾಕ್ಷೇಪಣಾ ಪತ್ರ, ಭೂ ಹಿಡುವಳಿದಾರರ ನಿರಾಕ್ಷೇಪಣಾ ಪತ್ರ, ಭೂಮಿ ವಿಭಾಗ ಸಂಬಂಧ ನಕ್ಷೆ, ಭೂ ಪರಿವರ್ತನೆ ಆದೇಶ, ತೆರಿಗೆ ಪಾವತಿ ರಸೀದಿ, 1960ರಿಂದ ಇಲ್ಲಿಯವರೆಗೂ ಪಹಣಿ, ಸೈಟ್ ಅಭಿವೃದ್ಧಿ ಶುಲ್ಕದ ರಸೀದಿ, ವಂಶವೃಕ್ಷ ಮತ್ತು ಕುಟುಂಬ ಸದಸ್ಯರು ಮರಣ ಹೊಂದಿದ್ದರೆ ಮರಣ ಪ್ರಮಾಣ ಪತ್ರ… ಇಷ್ಟೆಲ್ಲಾ ದಾಖಲೆ ಕಡ್ಡಾಯಗೊಳಿಸುವ ಸಾಧ್ಯತೆ ಇದೆ.