ಅಪ್ರಾಪ್ತ ಬಾಲಕಿ ಅಪಹರಿಸಿ ಅತ್ಯಾಚಾರ ಪ್ರಕರಣ : ಆರೋಪಿಗೆ 20 ವರ್ಷ ಕಠಿಣ ಶಿಕ್ಷೆ

ದಾವಣಗೆರೆ (Davanagere): ಅಪ್ರಾಪ್ತ ಬಾಲಕಿ ಅಪಹರಿಸಿಕೊಂಡು ಹೋಗಿ ಬಲವಂತವಾಗಿ ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ 20 ವರ್ಷ ಕಠಿಣ ಶಿಕ್ಷೆ, 35 ಸಾವಿರ ರೂ. ದಂಡ ವಿಧಿಸಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಎಫ್‌ಟಿಎಸ್‌ಸಿ-1 ನ್ಯಾಯಾಲಯ ತೀರ್ಪು ನೀಡಿ ಆದೇಶ ಹೊರಡಿಸಿದೆ.ಚನ್ನಗಿರಿ ತಾಲೂಕಿನ ಕೊಡ್ಲಹಳ್ಳಿ ಗ್ರಾಮದ ಲೋಕೇಶ್ (33) ಶಿಕ್ಷೆಗೊಳಗಾದ ಆರೋಪಿ.

2022ರ ಜುಲೈ 22ರಂದು ರಾತ್ರಿ ಅಪ್ರಾಪ್ತ ಬಾಲಕಿ ಮನೆಗೆ ಬಂದಿರಲಿಲ್ಲ. ಎಲ್ಲ ಕಡೆ ಹುಡುಕಿದರೂ ಪತ್ತೆಯಾಗಿರಲಿಲ್ಲ. ಆರೋಪಿ ಲೋಕೇಶ್ ಅಪಹರಿಸಿಕೊಂಡು ಹೋಗಿದ್ದಾನೆ ಎಂದು ಪೋಷಕರು ಜುಲೈ 26ರಂದು ಸಂತೇಬೆನ್ನೂರು ಠಾಣೆಯಲ್ಲಿ ದೂರು ದಾಖಲಿಸಿದ್ದರು.

ತನಿಖಾಧಿಕಾರಿ ಈ.ಎಸ್.ಮಹೇಶ್, ತನಿಖೆ ನಡೆಸಿದಾಗ ಆರೋಪಿ ಒಂದು ವರ್ಷದಿಂದ ನಿನ್ನನ್ನು ಪ್ರೀತಿಸುತ್ತೇನೆ. ನಿನ್ನನ್ನು ಮದುವೆಯಾಗುವುದಾಗಿ ಅಪಹರಿಸಿ ಹಾಸನ ಜಿಲ್ಲೆ ಅರಸೀಕೆರೆಗೆ ಕರೆದುಕೊಂಡು ಹೋಗಿ ತೋಟದ ಮನೆಯಲ್ಲಿ ಅಪ್ರಾಪ್ತ ಎಂದು ಗೊತ್ತಿದ್ದರೂ ಅವರ ಜೊತೆ ಲೈಂಗಿಕ ಸಂಪರ್ಕ ನಡೆಸಿದ್ದ ಎಂದು ತಿಳಿದ್ದಿದ್ದರಿಂದ ನ್ಯಾಯಾಲಯಕ್ಕೆ ದೋಷರೋಪಣಾ ಪಟ್ಟಿ ಸಲ್ಲಿಸಲಾಗಿತ್ತು.

ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಎಫ್‌ಟಿಎಸ್‌ಸಿ-1 ನ್ಯಾಯಾಲಯದ ನ್ಯಾಯಾಧೀಶರಾಧ ಶ್ರೀರಾಮ ನಾರಾಯಣ ಹೆಗಡೆ ಅವರು ಸೋಮವಾರ ವಿಚಾರಣೆ ನಡೆಸಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗೆ 20 ವರ್ಷ ಶಿಕ್ಷೆ, 35 ಸಾವಿರ ದಂಡ ವಿಧಿಸಿ, ದಂಡ ಮತ್ತು ಸರ್ಕಾರದಿಂದ 4 ಲಕ್ಷ ರೂ. ಪರಿಹಾರವನ್ನು ಸಂತ್ರಸ್ತೆಗೆ ನೀಡುವಂತೆ ಆದೇಶ ನೀಡಿದ್ದಾರೆ.

ಪಿರ್ಯಾದಿ ಪರ ಸರ್ಕಾರಿ ವಕೀಲರಾದ ಸುನಂದಾ ಮಡಿವಾಳರ್ ವಾದ ಮಂಡಿಸಿದ್ದರು.

Share with friends

Related Post

Leave a Reply

Your email address will not be published.