1ರಿಂದ 2ರಷ್ಟು ಶುಲ್ಕ ಪಡೆಯಲಿದೆ. ಈ ಸಂಬಂಧ ರಾಜ್ಯ ಸರ್ಕಾರ ಮಸೂದೆ ರೂಪಿಸಿದೆ.
ಬೆಂಗಳೂರು, ಅಕ್ಟೋಬರ್ 18: ಫೂಡ್ ಡೆಲಿವರಿ ಪ್ಲಾಟ್ಫಾರ್ಮ್ಗಳು, ಇಕಾಮರ್ಸ್ ಪ್ಲಾಟ್ಫಾರ್ಮ್ಗಳು ಇತ್ಯಾದಿ ಅಗ್ರಿಗೇಟಿಂಗ್ ಆಯಪ್ಗಳಲ್ಲಿ ಗ್ರಾಹಕರು ನಡೆಸುವ ಪ್ರತೀ ವಹಿವಾಟಿಗೆ ಶೇ. 1ರಿಂದ 2ರಷ್ಟು ಶುಲ್ಕ ವಿಧಿಸಲು ಕರ್ನಾಟಕ ಸರ್ಕಾರ ಯೋಜಿಸಿದೆ. ಪ್ಲಾಟ್ಫಾರ್ಮ್ ಶುಲ್ಕ ಇತ್ಯಾದಿ ಈಗಾಗಲೇ ಇರುವ ಹಲವು ಶುಲ್ಕಗಳಿಗೆ ಹೆಚ್ಚುವರಿಯಾಗಿ ಇದು ಇರಲಿದೆ. ರಾಜ್ಯ ಸರ್ಕಾರ ಈಗಾಗಲೇ ಮಸೂದೆ ರೂಪಿಸಿದ್ದು, ವಿಧಾನಸಭೆಯಲ್ಲಿ ಇದಕ್ಕೆ ಅನುಮೋದನೆ ಪಡೆದ ಬಳಿಕ ಜಾರಿಗೆ ತರುವ ಸಾಧ್ಯತೆ ಇದೆ ಎನ್ನುವ ವರದಿಯಾಗಿದೆ. ಡೆಲಿವರಿ ಬಾಯ್ಗಳ ಸಾಮಾಜಿಕ ಭದ್ರತೆಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಈ ಹೆಜ್ಜೆ ಇಡುತ್ತಿದೆ.
ಜೊಮಾಟೊ, ಸ್ವಿಗ್ಗಿ, ಫ್ಲಿಪ್ಕಾರ್ಟ್, ಅಮೇಜಾನ್, ಓಲಾ, ಊಬರ್, ಅರ್ಬನ್ ಕಂಪನಿ, ರಾಪಿಡೋ, ನಮ್ಮ ಯಾತ್ರಿ, ಡುಂಜೋ, ಜೆಪ್ಟೋ, ಪೋರ್ಟರ್ ಇತ್ಯಾದಿ ಅಗ್ರಿಗೇಟರ್ ಪ್ಲಾಟ್ಫಾರ್ಮ್ಗಳಲ್ಲಿ ಗ್ರಾಹಕರಿಗೆ ಡೆಲಿವರಿ ಸರ್ವಿಸ್ ನೀಡುವ ಕಾರ್ಮಿಕರಿಗೆ ಸರ್ಕಾರ ನೆರವಾಗಲಿದೆ. ಅದಕ್ಕಾಗಿ ವೆಲ್ಫೇರ್ ಬೋರ್ಡ್ ಸ್ಥಾಪಿಸಲಾಗುತ್ತಿದೆ. ಈ ಪ್ಲಾಟ್ಫಾರ್ಮ್ಗಳಲ್ಲಿ ಸಂಗ್ರಹಿಸಲಾಗುವ ಶುಲ್ಕದ ಹಣವನ್ನು ಈ ಮಂಡಳಿಗೆ ವರ್ಗಾಯಿಸಲಾಗುತ್ತದೆ.
ಡೆಲಿವರಿ ಹುಡುಗರ ಸಾಮಾಜಿಕ ಭದ್ರತೆಗೆ ಯೋಜನೆ ಕೈಗೊಳ್ಳಲಾಗುವುದನ್ನು ಕರ್ನಾಟಕ ಸರ್ಕಾರ ಈ ಹಿಂದೆಯೇ ತಿಳಿಸಿತ್ತು. ಅಗ್ರಿಗೇಟರ್ ಕಂಪನಿಯು ಕರ್ನಾಟಕದಿಂದ ಪಡೆಯುವ ಒಟ್ಟಾರೆ ವಾರ್ಷಿಕ ಆದಾಯದಲ್ಲಿ ಒಂದು ನಿರ್ದಿಷ್ಟ ಮೊತ್ತವನ್ನು ಶುಲ್ಕವಾಗಿ ಪಡೆಯುವುದೋ, ಅಥವಾ ಪ್ರತೀ ವಹಿವಾಟಿನ ಮೇಲೆ ಶುಲ್ಕ ಪಡೆಯುವುದೋ ಎನ್ನುವ ಗೊಂದಲ ಇತ್ತು. ಈಗ ಅಂತಿಮವಾಗಿ ವಹಿವಾಟು ಆಧಾರಿತ ಶುಲ್ಕದ ನಿರ್ಧಾರಕ್ಕೆ ಬರಲಾಗಿದೆ.