ಚನ್ನಪಟ್ಟಣ ಉಪ ಚುನಾವಣೆಯ ಮೈತ್ರಿ ಟಿಕೆಟ್ ಹಗ್ಗಜಗ್ಗಾಟ ರೋಚಕ ಘಟ್ಟ ತಲುಪಿದೆ. ಬಿಜೆಪಿ ಟಿಕೆಟ್ ಸಿಗುವ ನಿರೀಕ್ಷೆಯಲ್ಲಿರುವ ಸಿ.ಪಿ. ಯೋಗೇಶ್ವರ್ ಕಾದು ನೋಡುವ ತೀರ್ಮಾನಕ್ಕೆ ಬಂದಿದ್ದಾರೆ. ಸ್ಪರ್ಧೆ ಖಚಿತ ಎಂದು ಹೇಳಿದ್ದಾರೆ, ಆದರೆ ಯಾವ ಪಕ್ಷದಿಂದ ಎಂಬ ಗೊಂದಲಕ್ಕೆ ಇನ್ನೂ ತೆರೆ ಎಳೆದಿಲ್ಲ.ಈ ನಡುವೆ ಸಿಪಿ ಯೋಗೇಶ್ವರ್ ಕಾಂಗ್ರೆಸ್ ಸೇರಲಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕರ್ನಾಟಕದ ಕಾಂಗ್ರೆಸ್‌ನ ಉನ್ನತ ನಾಯಕರು ಯೋಗೇಶ್ವರ್ ಅವರನ್ನು ತಮ್ಮ ಪಕ್ಷಕ್ಕೆ ಬರ ಮಾಡಿಕೊಳ್ಳಲು ಸಿದ್ದರಾಗಿದ್ದಾರೆ. ಯೋಗೇಶ್ವರ್ ಪಕ್ಷ ಸೇರ್ಪಡೆಗೆ ಡಿ.ಕೆ ಸುರೇಶ್ ಸೇರಿದಂತೆ ಯಾವುದೇ ನಾಯಕರು ವಿರೋಧ ವ್ಯಕ್ತ ಪಡಿಸಿಲ್ಲ. ಯೋಗೇಶ್ವರ ಅವರು ತಮ್ಮ ಬೆಂಬಲಿಗರ ಸಭೆ ನಡೆಸಿ, ಕಾಂಗ್ರೆಸ್ ಸೇರಬೇಕೋ ಅಥವಾ ಸ್ವತಂತ್ರವಾಗಿ ಸ್ಪರ್ಧಿಸಬೇಕೋ ಎಂಬ ಬಗ್ಗೆ ಶೀಘ್ರವೇ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದ್ದಾರೆ. ಆದರೆ ಗುರುವಾರ ನಾಮಪತ್ರ ಸಲ್ಲಿಸುವುದಾಗಿ ತಿಳಿಸಿದ್ದಾರೆ.ಯೋಗೇಶ್ವರ್ ಅವರು ಗುರುವಾರ ಸಿಎಂ ಸಿದ್ದರಾಮಯ್ಯ, ಡಿಸಿಎಂ ಮತ್ತು ಕೆಪಿಸಿಸಿ ಮುಖ್ಯಸ್ಥ ಡಿಕೆ ಶಿವಕುಮಾರ್ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ನಂತರವೇ ಯೋಗೇಶ್ವರ್ ಅವರನ್ನು ಚನ್ನಪಟ್ಟಣದಿಂದ ಕಣಕ್ಕಿಳಿಸುವ ಕುರಿತು ಸಿಎಂ ಜತೆ ಚರ್ಚಿಸುವುದಾಗಿ ಶಿವಕುಮಾರ್ ಮಂಗಳವಾರ ಹೇಳಿದ್ದಾರೆ. ಯೋಗೇಶ್ವರ ಅವರು ಸೋಮವಾರ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ತಮ್ಮ ಬೆಂಬಲಿಗರನ್ನು ಭೇಟಿ ಮಾಡಿದ್ದಾರೆ ಎಂದು ನನಗೆ ತಿಳಿದಿದೆ. ಬಿಜೆಪಿ ನಾಯಕರು ಅವರೊಂದಿಗೆ ಈ ಸಂಬಂಧ ಮಾತುಕತೆ ನಡೆಸುತ್ತಿದ್ದಾರೆ. ಅವರು ಇನ್ನೂ ಬಿಜೆಪಿಯಲ್ಲೇ ಇರುವುದರಿಂದ ಕಾಂಗ್ರೆಸ್ ಪಕ್ಷದಿಂದ ಅವರನ್ನು ಕಣಕ್ಕಿಳಿಸುವ ಬಗ್ಗೆ ನಾನೇಕೆ ಮಾತನಾಡಲಿ ಎಂದು ಶಿವಕುಮಾರ್ ಮಾಧ್ಯಮಗಳಿಗೆ ತಿಳಿಸಿದರು.ಅಕ್ಟೋಬರ್ 16 ರಂದು, ವಸತಿ ಸಚಿವ ಬಿಝಡ್ ಜಮೀರ್ ಅಹ್ಮದ್ ಖಾನ್, ಸಿಎಂ ಮತ್ತು ಡಿಸಿಎಂ ಪರವಾಗಿ ಯೋಗೇಶ್ವರ ಅವರೊಂದಿಗೆ ಮಾತುಕತೆ ನಡೆಸಿ ಎಲ್ಲಾ ವಿಷಯ ಫೈನಲ್ ಮಾಡಿದ್ದಾರೆ ಬಲ್ಲ ಮೂಲಗಳು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿವೆ.ಇದೇ ವೇಳೆ ಶಿವಕುಮಾರ್ ಅವರ ಕಿರಿಯ ಸಹೋದರ, ಬೆಂಗಳೂರು ಗ್ರಾಮಾಂತರ ಮಾಜಿ ಸಂಸದ ಡಿ.ಕೆ.ಸುರೇಶ್, ಯೋಗೇಶ್ವರ್ ಅವರು ಕಾಂಗ್ರೆಸ್ ಸೇರುವ ಬಗ್ಗೆ ನನಗೆ ಯಾವುದೇ ಆತಂಕವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. “ನಾನು ಪಕ್ಷದ ಕಾರ್ಯಕರ್ತ ಮತ್ತು ನಮ್ಮ ಪಕ್ಷಕ್ಕೆ ಸೇರಲು ಬಯಸುವವರನ್ನು ಸ್ವಾಗತಿಸುತ್ತೇನೆ. ಅಂತಿಮವಾಗಿ ನಿರ್ಧಾರ ಕೈಗೊಳ್ಳುವುದು ಪಕ್ಷದ ಉನ್ನತ ನಾಯಕರಿಗೆ ಬಿಟ್ಟ ವಿಚಾರ ಎಂದು ಹೇಳಿದ್ದಾರೆ.ಇದೇ ವೇಳೆ ಸುರೇಶ್ ಅವರು ಉಪಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ, ಯೋಗೇಶ್ವರ ಅವರು ಈ ಭಾಗದ ಪ್ರಭಾವಿ ನಾಯಕರಾಗಿರುವ ಕಾರಣ ಅವರು ಕಾಂಗ್ರೆಸ್ ಸೇರುವುದರಿಂದ ಪಕ್ಷಕ್ಕೆ ಅನುಕೂಲವಾಗಲಿದೆ ಎಂದಿದ್ದಾರೆ. ಕಾರ್ಮಿಕ ಸಚಿವ ಸಂತೋಷ್ ಲಾಡ್ ಕೂಡ ಯೋಗೇಶ್ವರ ಅವರು ಕಾಂಗ್ರೆಸ್ ಸೇರುವುದನ್ನು ಸ್ವಾಗತಿಸುವುದಾಗಿ ಹೇಳಿದ್ದರು.