ಟಿಕೆಟ್ ಘೋಷಣೆ ಬಳಿಕವೂ ಇಲ್ಲ ತಕರಾರು: ಹರಿ-ಹರರ ಸಂಗಮ ಕ್ಷೇತ್ರದಲ್ಲಿ ತ್ರಿಮೂರ್ತಿಗಳ ಒಗ್ಗಟ್ಟು !ಮಾದರಿ ರಾಜಕಾರಣ ಎನ್ನಬೇಕೋ.., ಪಕ್ಷ ನಿಷ್ಠೆ ಎನ್ನಬೇಕೋ.., ರಾಜಕೀಯ ಅನಿವಾರ್ಯತೆ ಎನ್ನಬೇಕೋ..? ಗೊತ್ತಿಲ್ಲ. ಹರಿ-ಹರರ ಸಂಗಮ ಕ್ಷೇತ್ರ ಹರಿಹರದಲ್ಲಿ ಬಿಜೆಪಿಯ ತ್ರಿಮೂರ್ತಿಗಳು ಪ್ರದರ್ಶಿಸುತ್ತಿರುವ ಒಗ್ಗಟ್ಟು ಇದೀಗ ಇಡಿ ರಾಜ್ಯದ ಕಣ್ಣರಳಿಸಿದೆ.ಏನದು ಒಗ್ಗಟ್ಟು? ಟಿಕೆಟ್ ಪಡೆದವರು-ಟಿಕೆಟ್ ವಂಚಿತರು ಬಂಡಾಯದ ಬಾವುಟ ಹಾರಿಸದೆ ಅಧಿಕೃತ ಅಭ್ಯರ್ಥಿಯ ಗೆಲುವಿಗೆ ಪಣ ತೊಟ್ಟಿದ್ದಾರೆ. ತಾವೇ ಅಭ್ಯರ್ಥಿ ಎಂದು ಭಾವಿಸಿ ಒಂದೇ ವಾಹನ ಏರಿ ಪ್ರಚಾರಕ್ಕೆ ಹೊರಟು ನಿಂತಿದ್ದಾರೆ. ಮಾಜಿ ಶಾಸಕ ಬಿ.ಪಿ.ಹರೀಶ್(ಅಭ್ಯರ್ಥಿ), ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಎಂ.ವೀರೇಶ, ಯುವ ಮುಖಂಡ ಪೂಜಾರ್ ಚಂದ್ರಶೇಖರ್ ಅವರೇ ಈ ಮೂವರು! ಈ ನಿಲುವು ಪ್ರಾಮಾಣಿಕವಾಗಿದ್ದರೆ ಚುನಾವಣೆ ಹೊತ್ತಲ್ಲಿ ಇದೊಂದು ಮಾದರಿ ನಡೆ ಮಾತ್ರವಲ್ಲ. ಉಳಿದ ಪಕ್ಷಗಳಿಗೂ ಅನುಕರಣೀಯವೂ ಹೌದು!ಅಲಿಖಿತ ಕರಾರು ಜಿದ್ದಾ-ಜಿದ್ದಿಯ ನೆಲ ಹರಿಹರದಲ್ಲಿ ಮೂವರು ಟಿಕೆಟ್ ಆಕಾಂಕ್ಷಿಗಳಿದ್ದರು. ಎಲ್ಲರೂ ಅವರವರ ನೆಲೆಯಲ್ಲಿ ಶತಾಯ-ಗತಾಯ ಪ್ರಯತ್ನ ಕೂಡ ನಡೆಸಿದ್ದರು. ಆದರೆ, ಮೂವರಲ್ಲಿ ಯಾರಿಗೇ ಟಿಕೆಟ್ ಸಿಕ್ಕರೂ ಉಳಿದಿಬ್ಬರು ಅಭ್ಯರ್ಥಿ ಪರವಾಗಿ ಮುಂದೆ ನಿಂತು ಕೆಲಸ ಮಾಡಬೇಕು ಎಂಬ ಅಲಿಖಿತ ಕರಾರು ಮಾಡಿಕೊಂಡಿದ್ದರು. ಇದಕ್ಕೆ ಪೂರಕವಾಗಿ ಕಳೆದ ತಿಂಗಳೊಪ್ಪತ್ತಿನಿಂದ ಮೂವರೂ ಒಂದೇ ವಾಹನ ಏರಿ ಕ್ಷೇತ್ರದಾದ್ಯಂತ ಪ್ರಚಾರದಲ್ಲಿ ತೊಡಗಿದ್ದರು. ಒಂದೇ ವೇದಿಕೆಯಲ್ಲಿ ನಿಂತು ಭಾಷಣ ಮಾಡಿದ್ದರು.ಬಂಡಾಯದ ಬಿಸಿಗಾಳಿ ಬೀಸಿಲ್ಲಮೊನ್ನೆ ಬಿಡುಗಡೆಯಾದ ಬಿಜೆಪಿ ಮೊದಲ ಪಟ್ಟಿಯಲ್ಲಿ ಹರಿಹರಕ್ಕೆ ಅಭ್ಯರ್ಥಿ ಘೋಷಿಸಿರಲಿಲ್ಲ. ಎರಡನೇ ಪಟ್ಟಿಯಲ್ಲಿ ಬಿ.ಪಿ.ಹರೀಶ್ ಹೆಸರಿತ್ತು. ಉಳಿದಿಬ್ಬರಿಗೆ ಅವಕಾಶ ಕೈ ತಪ್ಪಿತು. ಹಾಗಂತ ಇಲ್ಲಿ, ಟಿಕೆಟ್ ವಂಚಿತರಾರೂ ಬಂಡಾಯ ಏಳಲಿಲ್ಲ, ಪಕ್ಷೇತರರಾಗಿಕಣಕ್ಕಿಳಿದು ಪಕ್ಷಕ್ಕೆ ಡ್ಯಾಮೇಜ್ ಮಾಡುವ ಬೆದರಿಕೆಯನ್ನೂ ಹಾಕಿಲ್ಲ. ಪೂರ್ವನಿರ್ಧರಿತ ಕರಾರಿನಂತೆ ಉಳಿದಿಬ್ಬರು ಅಭ್ಯರ್ಥಿ ಪರ ಪ್ರಚಾರ ಕೈಗೊಂಡು ಗೆಲ್ಲಿಸಿಕೊಳ್ಳುವ ಉಮೇದು ತೋರಿದ್ದಾರೆ. ಹಾಗಾಗಿ ಇಲ್ಲಿ ಬಂಡಾಯದ ಬಿಸಿಗಾಳಿ ಬೀಸಿಲ್ಲ. ಈಗಲೂ ಮೂವರು ಒಟ್ಟಾಗಿದ್ದಾರೆ. ಒಟ್ಟಾಗಿಯೇ ಪ್ರಚಾರ ಮುಂದುವರಿಸುವ ಸಂಕಲ್ಪ ಮರೆತಿಲ್ಲ. ಗೆಲುವಿನ ಗುರಿ ತಲುಪುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಒಟ್ಟಾಗಿ ಕೆಲಸ ಮಾಡುವ ನಿರ್ಧಾರಹರಿಹರ ವಿಧಾನಸಭೆ ಕ್ಷೇತ್ರದ ಈವರೆಗಿನ ಚುನಾವಣೆ ಇತಿಹಾಸವನ್ನೊಮ್ಮೆ ಅವಲೋಕಿಸಿದರೆ ಇಲ್ಲಿ ಬಿಜೆಪಿ ಗೆದ್ದಿದ್ದು ಒಂದೇ ಬಾರಿ. ಅದು 2008ರಲ್ಲಿ. 2012ರಲ್ಲಿ ಕೆಜೆಪಿ-ಬಿಜೆಪಿ ಮತವಿಭಜನೆಯ ಲಾಭ ಜೆಡಿಎಸ್ ಪಾಲಾಯಿತು. 2018ರಲ್ಲೂ ಬಿಜೆಪಿ ಮುಗ್ಗರಿಸಿತು.ಸೋತ ಕ್ಷೇತ್ರದಲ್ಲಿ ಈ ಬಾರಿ ಗೆಲುವಿಗೆ ಹೋರಾಟ ನಡೆಸಿದೆ. ನಮ್ಮ-ನಮ್ಮಲ್ಲಿ ಜಿದ್ದಿಗೆ ಬಿದ್ದು ಆಂತರಿಕ ಭಿನ್ನಮತ ಎದುರಾದರೆ ಪಕ್ಷಕ್ಕೆ ದುಬಾರಿ ಆದೀತು ಎಂದು ಮೂವರು ಒಟ್ಟಾಗಿ ಕೆಲಸ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ.ಟಿಕೆಟ್ ಯಾರಿಗೆ ಸಿಕ್ಕಿದೆ ಎಂಬುದಕ್ಕಿಂತ ನಮಗೆ ಪಕ್ಷ ಹಾಗೂ ಗೆಲುವು ಮುಖ್ಯ.ನಾವು ನಿಷ್ಠಾವಂತ ಬಿಜೆಪಿಗರು ಹೀಗಾಗಿ ಹರೀಶ್ ಗೆಲುವಿಗೆ ಚಂದ್ರಶೇಖರ್ ಮತ್ತು ನಾನು ಒಟ್ಟಿಗೆ ಕೆಲಸ ಮಾಡುತ್ತೇವೆ. ಇಲ್ಲಿ ಕಮಲ ಅರಳುವುದನ್ನು ಯಾರಿಂದಲೂ ತಪ್ಪಿಸಲು ಆಗದು.| ಎಸ್.ಎಂ.ವೀರೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದ ನಿರ್ಧಾರವನ್ನು ನಾವು ಗೌರವಿಸುತ್ತೇವೆ. ಟಿಕೆಟ್ ಸಿಕ್ಕಿದ್ದು ಹರೀಶ್ ಅವರಿಗಾದರೂ ನಾವೇ ಅಭ್ಯರ್ಥಿ ಎಂದು ಭಾವಿಸಿ ಕೆಲಸ ಮಾಡುತ್ತೇವೆ. ವರಿಷ್ಠರ ಮಾರ್ಗದರ್ಶನದಲ್ಲಿ ಮನೆ,ಮನೆಗೆ ತೆರಳಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುತ್ತೇವೆ.| ಚಂದ್ರಶೇಖರ್ ಪೂಜಾರ್ಬಿ.ಪಿ.ಹರೀಶ್,ಎಸ್.ಎಂ.ವೀರೇಶ್, ಪೂಜಾರ್ ಚಂದ್ರಶೇಖರ್ ಮೂವರಲ್ಲಿ ಯಾರಿಗೇ ಟಿಕೆಟ್ ಸಿಕ್ಕರೂ ಎಲ್ಲರೂ ಒಟ್ಟಾಗಿ ಪಕ್ಷದ ಗೆಲುವಿಗೆ ಶ್ರಮಿಸಲು ಸಿಎಂ ಎದುರು ಜನ ಸಂಕಲ್ಪ ಸಮಾವೇಶದಲ್ಲಿ ಪ್ರಮಾಣ ಮಾಡಿದ್ದೆವು. ನನಗೀಗ ಟಿಕೆಟ್ ಸಿಕ್ಕಿದೆ. ಈಗಲೂ ಎಲ್ಲರೂ ಒಟ್ಟಾಗಿ ಕ್ಷೇತ್ರದಲ್ಲಿ ಸಂಚರಿಸುತ್ತಿದ್ದೇವೆ. ಯಾವುದೇ ವೈಮಸ್ಸಿಲ್ಲದೆ ಒಟ್ಟಾಗಿದ್ದೇವೆ.ಬಿ.ಪಿ.ಹರೀಶ್, ಬಿಜೆಪಿ ಅಭ್ಯರ್ಥಿ ಹರಿಹರ