ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ: ಎಸ್.ರವಿಕುಮಾರ್2

ಶಿವಮೊಗ್ಗ: ದೈಹಿಕ ಹಾಗೂ ಮಾನಸಿಕ ಸದೃಢತೆ ಕಾಯ್ದುಕೊಳ್ಳಲು ಕ್ರೀಡೆ ಅತ್ಯಂತ ಸಹಕಾರಿ ಎಂದು ಕರ್ನಾಟಕ ಬೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ರವಿಕುಮಾರ್ ಹೇಳಿದರು.ನಗರದ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಸೋಮವಾರ ಶಿವಮೊಗ್ಗ ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ), ಮಹೇಶ್ ಪದವಿಪೂರ್ವ ಕಾಲೇಜಿನ ಸಹಯೋಗದಲ್ಲಿ ಆಯೋಜಿಸಿದ್ದ 19 ವರ್ಷದೊಳಗಿನ ರಾಜ್ಯಮಟ್ಟದ ಪಿಯು ಕಾಲೇಜುಗಳ ಎರಡು ದಿನದ ಬಾಕ್ಸಿಂಗ್ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.

ಜೀವನದ ಸವಾಲುಗಳನ್ನು ಅತ್ಯಂತ ಧನಾತ್ಮಕ ಮತ್ತು ಶಾಂತಿಯುತ ರೀತಿಯಲ್ಲಿ ಎದುರಿಸಲು ಕ್ರೀಡೆ ಪ್ರಮುಖ ಪಾತ್ರವಹಿಸುತ್ತದೆ. ಕ್ರೀಡೆ ಎಂಬುದು ಸಂಘಟಿತ ಸ್ಪರ್ಧಾತ್ಮಕ ಮತ್ತು ಕುಶಲತೆಯಿಂದ ಕೂಡಿದ ದೈಹಿಕ ಚಟುವಟಿಕೆಯಾಗಿದೆ. ಜೀವನದ ಸವಾಲುಗಳನ್ನು ಅತ್ಯಂತ ಧನಾತ್ಮಕ ಮತ್ತು ಶಾಂತ ರೀತಿಯಿಂದ ಎದುರಿಸಲು ಕ್ರೀಡೆ ನಮ್ಮನ್ನು ಸಿದ್ಧಪಡಿಸುತ್ತದೆ ಎಂದರು.ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರೇಖ್ಯಾ ನಾಯ್ಕ ಮಾತನಾಡಿ, ಸುಮಾರು 15 ಲಕ್ಷ ರೂ. ವೆಚ್ಚದಲ್ಲಿ ಬಾಕ್ಸಿಂಗ್ ರೌಂಡ್ ನಿರ್ಮಿಸಿದ್ದು ರಾಷ್ಟ್ರಮಟ್ಟದ ಕ್ರೀಡಾಕೂಟದಂತೆ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಡಿಡಿಪಿಯು ಚಂದ್ರಪ್ಪ ಎಸ್.ಗುಂಡಪಲ್ಲಿ ಮಾತನಾಡಿ, ಕ್ರೀಡೆಗಳು ಖಿನ್ನತೆ ದೂರ ಮಾಡುವ ಜತೆಗೆ ಸದಾ ಸದೃಢರಾಗಿ ಧನಾತ್ಮಕ ಚಿಂತನೆಯಿಂದ ಇರುವಂತೆ ಮಾಡುತ್ತವೆ ಎಂದರು.ಉದ್ಘಾಟನಾ ಪಂದ್ಯದ 46 ಕೆಜಿ ವಿಭಾಗದಲ್ಲಿ ಮೈಸೂರಿನ ಯಶಸ್ ಮತ್ತು ಚಿಕ್ಕಮಗಳೂರಿನ ಅಭಿಷೇಕ್ ನಡುವೆ ಹಣಾಹಣಿ ನಡೆಯಿತು. ಅದರಲ್ಲಿ ಯಶಸ್ ವಿಜಯಮಾಲೆ ಧರಿಸಿದರು. ಎರಡನೇ ಪಂದ್ಯದಲ್ಲಿ ಬೆಂಗಳೂರು ಉತ್ತರದ ಎಸ್.ನಿಖಿಲ್ ಅವರು ದಕ್ಷಿಣ ಕನ್ನಡದ ಪ್ರೇರಣ್ ಅವರನ್ನು ಮಣಿಸಿ ಮುಂದಿನ ಸುತ್ತಿಗೆ ಆಯ್ಕೆಯಾದರು. ಒಟ್ಟಾರೆ ರಾಜ್ಯಮಟ್ಟದ ಬಾಕ್ಸಿಂಗ್ ಕ್ರೀಡಾಕೂಟಕ್ಕೆ 17 ಜಿಲ್ಲೆಗಳಿಂದ 120 ಯುವಕರು ಹಾಗೂ 40 ಯುವತಿಯರು ಪಾಲ್ಗೊಂಡಿದ್ದರು.ಕರ್ನಾಟಕ ಬಾಕ್ಸಿಂಗ್ ಅಸೋಸಿಯೇಷನ್ ಗೌರವಾಧ್ಯಕ್ಷ ದೇವರಾಜ್ ಮಂಡನಕೊಪ್ಪ, ಕರ್ನಾಟಕ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಸಾಯಿ ಸತೀಶ್, ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್, ಡಿವಿಎಸ್ ಸ್ವತಂತ್ರ ಪಿಯು ಕಾಲೇಜಿನ ಪ್ರಾಚಾರ್ಯ ಎ.ಇ.ರಾಜಶೇಖರ್, ಪಂಡ್ರಿನಾಥ್, ಪಳನಿ ವೇಲು, ಶ್ರೀಹರಿ, ಶಶಿಕುಮಾರ್, ನಾಗೇಂದ್ರ ಪ್ರಸಾದ್, ಕೆ.ಎಚ್.ಪ್ರಸನ್ನ, ವಿ.ಶುಭಕರ, ಬೆಂಜಮಿನ್ ಫ್ರಾನ್ಸಿಸ್, ಜಿ.ಎಫ್.ಕುಟ್ರಿ, ಶಿವಮೊಗ್ಗ ವಿನೋದ್ ಉಪಸ್ಥಿತರಿದ್ದರು.

Share with friends

Related Post

Leave a Reply

Your email address will not be published.