ನಿಮಗೆ ಮದ್ರಸಾ ಮೇಲೆ ಮಾತ್ರ ಏಕೆ ಕಣ್ಣು? : NCPCR ಗೆ ಸುಪ್ರೀಂ ಕೋರ್ಟ್‌ ಪ್ರಶ್ನೆ

ನಿಮಗೆ ಮದ್ರಸಾ ಮೇಲೆ ಮಾತ್ರ ಏಕೆ ಕಣ್ಣು? ಇತರ ಧರ್ಮಗಳ ಸಂಸ್ಥೆಗಳನ್ನೂ ಸಮಾನವಾಗಿ ಪರಿಗಣಿಸಿದ್ದೀರಾ?”, ಎಂದು ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ರಾಷ್ಟ್ರೀಯ ಆಯೋಗ(NCPCR)ವನ್ನು ಸುಪ್ರೀಂ ಕೋರ್ಟ್‌ ಮಂಗಳವಾರ ಪ್ರಶ್ನಿಸಿದೆ.

ಭಾರತದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿ ಜೆಬಿ ಪರ್ದಿವಾಲಾ ಮತ್ತು ನ್ಯಾಯಮೂರ್ತಿ ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು ಅಲಹಾಬಾದ್ ಉಚ್ಛ ನ್ಯಾಯಾಲಯದ ತೀರ್ಪಿನ ವಿರುದ್ಧದ ಮೇಲ್ಮನವಿಗಳ ವಿಚಾರಣೆ ನಡೆಸುತ್ತಿದ್ದಾಗ ಈ ಪ್ರಸಂಗ ನಡೆಯಿತು.

ಮದ್ರಸಾ ಶಿಕ್ಷಣ ವ್ಯವಸ್ಥೆಯ ವಿರುದ್ಧ ಆಯೋಗವು ತೆಗೆದುಕೊಂಡ ನಿಲುವನ್ನು ಪ್ರಶ್ನಿಸುವ ಸಂದರ್ಭ ಸುಪ್ರೀಂ ಕೋರ್ಟ್ ಈ ಪ್ರತಿಕ್ರಿಯೆ ನೀಡಿದೆ. ಆಯೋಗವು ಇತರ ಧರ್ಮಗಳ ಸಂಸ್ಥೆಗಳ ವಿರುದ್ಧ ಅದೇ ನಿಲುವನ್ನು ತೆಗೆದುಕೊಂಡಿದೆಯೇ ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ.

ಇತರ ಧರ್ಮಗಳ ಮಕ್ಕಳು ಧಾರ್ಮಿಕ ಅಧ್ಯಯನ ಮತ್ತು ಪುರೋಹಿತಶಾಹಿ ತರಬೇತಿಗಾಗಿ ಸೇರುವ ಇದೇ ರೀತಿಯ ಸಂಸ್ಥೆಗಳಿವೆ ಎಂದು ಸೂಚಿಸಿದ ಸುಪ್ರೀಂ ಕೋರ್ಟ್, ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ರಾಷ್ಟ್ರೀಯ ಆಯೋಗಕ್ಕೆ “ನಿಮಗೆ ಮದ್ರಸಾಗಳ ಬಗ್ಗೆ ಮಾತ್ರ ಏಕೆ ಕಣ್ಣು?” ಎಂದು ಪ್ರಶ್ನಿಸಿತು. ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ರಾಷ್ಟ್ರೀಯ ಆಯೋಗವು ಮದ್ರಸಾ ವ್ಯವಸ್ಥೆಗೆ ಆಕ್ಷೇಪಣೆಗಳನ್ನು ಎತ್ತುವ ವರದಿಯನ್ನು ಸಲ್ಲಿಸಿದೆ. ಮದ್ರಸಾದಲ್ಲಿ ಪಾಲಿಸುತ್ತಿರುವ ಮಾನದಂಡಗಳು ಶಿಕ್ಷಣ ಹಕ್ಕು ಕಾಯ್ದೆಗೆ ಅನುಗುಣವಾಗಿಲ್ಲ ಎಂದೂ ಆಯೊಗವು ಹೇಳಿತ್ತು. ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ರಾಷ್ಟ್ರೀಯ ಆಯೋಗವು ಮದ್ರಸಾ ಪಠ್ಯಕ್ರಮವನ್ನು ಆಳವಾಗಿ ಅಧ್ಯಯನ ಮಾಡಿದೆಯೇ? ಎಂದು ನ್ಯಾಯಾಲಯವು ಪ್ರಶ್ನಿಸಿದೆ. ಪೀಠದಲ್ಲಿದ್ದ ನ್ಯಾಯಮೂರ್ತಿ ಪರ್ದಿವಾಲಾ, NCPCR ಮದ್ರಸಾ ಪಠ್ಯಕ್ರಮದ ಯಾವುದೇ ಆಳವಾದ ಅಧ್ಯಯನವನ್ನು ನಡೆಸಿದೆಯೇ? ಎಂದು ಕೇಳಿದರು.

ಮದ್ರಸಾ ಪಠ್ಯಕ್ರಮವು ಧಾರ್ಮಿಕ ಬೋಧನೆಯ ಬಗ್ಗೆ ಮಾತನಾಡುತ್ತದೆಯೇ? ಧಾರ್ಮಿಕ ಬೋಧನೆ ಎಂದರೇನು? ನೀವು ಏನು ಅರ್ಥಮಾಡಿಕೊಂಡಿದ್ದೀರಿ? ನಿಮ್ಮ ವಾದದಲ್ಲಿ ‘ಧಾರ್ಮಿಕ ಭೋದನೆಗಳು’ ಎಂಬ ಪದವು ನಿಮ್ಮನ್ನು ಅತ್ತ ಸೆಳೆದಿರುವಂತೆ ಕಾಣುತ್ತಿದೆ. ಅದೇ ನಿಮ್ಮ ತಲೆಗೆ ಹೊಕ್ಕಿದೆ. ಅದಕ್ಕಾಗಿಯೇ ನೀವು ಅದರಿಂದ ಹೊರಬರುತ್ತಿಲ್ಲ. ನಿಮ್ಮ ವಾದವು ಸರಿಯಿಲ್ಲ” ಎಂದು ನ್ಯಾಯಮೂರ್ತಿ ಪರ್ದಿವಾಲಾ ಚಾಟಿ ಬೀಸಿದರು. ಪೀಠವು ಉತ್ತರ ಪ್ರದೇಶ ಬೋರ್ಡ್ ಆಫ್ ಮದ್ರಸಾ ಎಜುಕೇಶನ್ ಆಕ್ಟ್ 2004 ಅನ್ನು ಅಸಂವಿಧಾನಿಕ ಎಂದು ರದ್ದುಗೊಳಿಸಿ, ತನ್ನ ತೀರ್ಪನ್ನು ಕಾಯ್ದಿರಿಸಿತು.

Share with friends

Related Post

Leave a Reply

Your email address will not be published.