ಕನ್ನಡದಲ್ಲಿ ಸಾಕಷ್ಟು ಮಂದಿ ಯೂಟ್ಯೂಬರ್ಗಳಿದ್ದಾರೆ. ಆದರೆ ಕನ್ನಡಿಗರಿಗೆ ಅತ್ಯಂತ ಪ್ರೀತಿಯ, ಇಷ್ಟವಾಗುವ ಯೂಟ್ಯೂಬರ್ ಎಂದರೆ ಅದು ಡಾ ಬ್ರೋ. ಈ ಯುವಕ ಮಾಡುವ ಸಾಹಸಗಳು, ಆಪ್ತವಾಗಿ ಮಾತನಾಡುವ ರೀತಿ, ಆತನ ಧೈರ್ಯ, ತನ್ನ ವೀಕ್ಷಕರಿಗೆ ಅತ್ಯುತ್ತಮವಾದುದ ಮಾಹಿತಿ, ಹೊಸ ಸ್ಥಳಗಳನ್ನು ತೋರಿಸಬೇಕೆಂಬ ತುಡಿತ, ಆಡಂಭರವಿಲ್ಲದ, ದಿಮಾಕುಗಳಿಲ್ಲದ ಸರಳವಾದ ಮಾತು ಎಲ್ಲವೂ ಇಷ್ಟ. ಎಲ್ಲದಕ್ಕಿಂತಲೂ ಹೆಚ್ಚಾಗಿ ಡಾ ಬ್ರೋನ ಕನ್ನಡ ಪ್ರೀತಿ ಕನ್ನಡಿಗರಿಗೆ ಬಹಳ ಇಷ್ಟ. ಪ್ರವಾಸ ಮಾಡುತ್ತಾ ಟ್ರಾವೆಲ್ ವ್ಲಾಗ್ ಮಾಡುವ ಡಾ ಬ್ರೋ ಇತ್ತೀಚೆಗೆ ಆಫ್ರಿಕಾ ಪ್ರವಾಸಕ್ಕೆ ತೆರಳಿದ್ದು, ಅಲ್ಲಿನ ಶಾಲಾ ಮಕ್ಕಳಿಗೆ ಕನ್ನಡ ಹೇಳಿಕೊಟ್ಟಿದ್ದಾರೆ.
ಡಾ ಬ್ರೋ ನೈಜೀರಿಯಾ ಪ್ರವಾಸಕ್ಕೆ ಹೋಗಿದ್ದರು. ಯಾವುದೇ ದೇಶಕ್ಕೆ ಪ್ರವಾಸಕ್ಕೆ ಹೋದರು ಅಲ್ಲಿನ ಪ್ರವಾಸಿ ತಾಣದ ಬದಲಿಗೆ ಅಲ್ಲಿನ ನಗರ, ಹಳ್ಳಿ, ಜನ ಅವರ ಜೀವನಗಳನ್ನು ತೋರಿಸುವುದು ಡಾ ಬ್ರೋ ವಿಶೇಷತೆ. ನೈಜೀರಿಯಾ ಪ್ರವಾಸಕ್ಕೆ ಹೋದಾಗಲೂ ಸಹ ಅಲ್ಲಿನ ಮಾರುಕಟ್ಟೆ, ಅಲ್ಲಿನ ಜನ ಕುರಿ, ಮೇಕೆ, ಹಾವುಗಳ ಚರ್ಮಗಳನ್ನು ಹದ ಮಾಡುವ ವಿಧಾನ ಇನ್ನಿತರೆಗಳನ್ನು ತೋರಿಸಿದ್ದಾರೆ. ಹಾಗೆಯೇ ಅಲ್ಲಿನ ಶಾಲೆಯೊಂದಕ್ಕೆ ಭೇಟಿ ನೀಡಿರುವ ಡಾ ಬ್ರೋ ಅಲ್ಲಿನ ಮಕ್ಕಳಿಗೆ ಕನ್ನಡ ಹೇಳಿಕೊಟ್ಟಿದ್ದಾರೆ.