ಭಾರತದ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ಸ್ವೀಕರಿಸಿದ ಜಸ್ಟೀಸ್ ಸಂಜೀವ್ ಖನ್ನಾ; ಕಿರುಪರಿಚಯ

ಬೆಂಗಳೂರು: ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಯಾಗಿ ಹಲವಾರು ಮಹತ್ವದ ತೀರ್ಪುಗಳನ್ನು ನೀಡಿದ ನ್ಯಾಯಪೀಠದಲ್ಲಿದ್ದ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ಸೋಮವಾರ (ನವೆಂಬರ್ 11) ಭಾರತದ 51 ನೇ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಮಾಣ ವಚನ ಬೋಧಿಸಿದರು.

ಶುಕ್ರವಾರದಂದು ಸಿಜೆಐ ಆಗಿ ಅವಧಿ ಪೂರ್ಣಗೊಳಿಸಿದ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರ ಉತ್ತರಾಧಿಕಾರಿಯಾಗಿ ನ್ಯಾಯಮೂರ್ತಿ ಸಂಜೀವ್ ಖನ್ನಾ ಅಧಿಕಾರ ಸ್ವೀಕರಿಸಿದ್ದಾರೆ. ಕೇಂದ್ರ ಸರ್ಕಾರವು ನಿಕಟ ಪೂರ್ವ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು ಅಕ್ಟೋಬರ್ 16 ರಂದು ಮಾಡಿದ ಶಿಫಾರಸಿನ ಮೇರೆಗೆ ಅಕ್ಟೋಬರ್ 24 ರಂದು ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರ ನೇಮಕವನ್ನು ಅಧಿಕೃತವಾಗಿ ಪ್ರಕಟಿಸಿತ್ತು. ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು 2025ರ ಮೇ 13ರ ತನಕ ಕಾರ್ಯನಿರ್ವಹಿಸಲಿದ್ದಾರೆ. ನಿಕಟ ಪೂರ್ವ ಸಿಜೆಐ ನ್ಯಾಯಮೂರ್ತಿ ಡಿವೈ ಚಂದ್ರ ಚೂಡ ಅವರು 2022ರ ನವೆಂಬರ್ 9 ರಿಂದ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಕರ್ತವ್ಯ ನಿರ್ವಹಿಸಿದ್ದರು.

ಸುಪ್ರೀಂ ಕೋರ್ಟ್‌ನ ನೂತನ ಸಿಜೆಐ ನ್ಯಾಯಮೂರ್ತಿ ಸಂಜೀವ್ ಖನ್ನಾ ಯಾರು?ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಜಸ್ಟೀಸ್‌ ಸಂಜೀವ್ ಖನ್ನಾ ಅವರ ಹೆಸರನ್ನು ಶಿಫಾರಸು ಮಾಡಿದಾಗ ಅವರು ಸೇವಾ ಹಿರಿತನದಲ್ಲಿ ಎರಡನೇಯವರಾಗಿದ್ದರು. ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು 1960ರ ಮೇ 14 ರಂದು ಜನಿಸಿದ್ದು, ಕಾನೂನು ವೃತ್ತಿಯನ್ನು 1983ರಲ್ಲಿ ಶುರುಮಾಡಿದರು. ದೆಹಲಿ ಬಾರ್ ಕೌನ್ಸಿಲ್‌ನಲ್ಲಿ ವಕೀಲಿಕೆ ಶುರು ಮಾಡಿದ ಅವರಿಗೆ ಸಾಂವಿಧಾನಿಕ ಕಾನೂನು, ತೆರಿಗೆ, ನ್ಯಾಯಾಧಿಕರಣ, ವಾಣಿಜ್ಯ ಕಾನೂನು ಮತ್ತು ಪರಿಸರ ಕಾನೂನು ವಿಷಯಗಳಲ್ಲಿ ವಿಸ್ತೃತ ಪರಿಣತಿ ಇದೆ. ನ್ಯಾಯಮೂರ್ತಿ ಖನ್ನಾ ಅವರು ಆದಾಯ ತೆರಿಗೆ ಇಲಾಖೆಯ ಹಿರಿಯ ಸ್ಥಾಯಿ ವಕೀಲರಾಗಿಯೂ ಸೇವೆ ಸಲ್ಲಿಸಿದ್ದಾರೆ. 2004 ರಲ್ಲಿ, ಅವರು ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶಕ್ಕೆ ಸ್ಥಾಯಿ ಸಲಹೆಗಾರರಾಗಿ (ಸಿವಿಲ್) ನೇಮಕಗೊಂಡರು.

ನ್ಯಾಯಾಧೀಶರಾಗಿ, ನ್ಯಾಯಮೂರ್ತಿಯಾಗಿ ಸಂಜೀವ್ ಖನ್ನಾನ್ಯಾಯಮೂರ್ತಿ ಸಂಜೀವ್‌ ಖನ್ನಾ ಅವರು 2005 ರಲ್ಲಿ ದೆಹಲಿ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕಗೊಂಡರು. ಮರುವರ್ಷವೇ 2006 ರಲ್ಲಿ ಖಾಯಂ ನ್ಯಾಯಾಧೀಶರಾದರು. ಇದು ಅವರ ನ್ಯಾಯಾಂಗ ವೃತ್ತಿಜೀವನದಲ್ಲಿ ಮಹತ್ವದ ಮೈಲಿಗಲ್ಲಾಯಿತು. ಈ ಅವಧಿಯಲ್ಲಿ ನ್ಯಾಯಮೂರ್ತಿ ಖನ್ನಾ ಅವರು ದೆಹಲಿ ನ್ಯಾಯಾಂಗ ಅಕಾಡೆಮಿ, ದೆಹಲಿ ಇಂಟರ್ನ್ಯಾಷನಲ್ ಆರ್ಬಿಟ್ರೇಶನ್ ಸೆಂಟರ್ ಮತ್ತು ಜಿಲ್ಲಾ ನ್ಯಾಯಾಲಯದ ಮಧ್ಯಸ್ಥಿಕೆ ಕೇಂದ್ರಗಳಿಗೆ ಗಮನಾರ್ಹ ಕೊಡುಗೆಗಳನ್ನು ನೀಡಿದರು. ನ್ಯಾಯಾಂಗ ವ್ಯವಸ್ಥೆಯ ಉತ್ತಮ ಚಿತ್ರಣ ರೂಪಿಸುವಲ್ಲಿ ಮಹತ್ವದ ಪಾತ್ರವಹಿಸಿದರು.

ನ್ಯಾಯಮೂರ್ತಿ ಖನ್ನಾ ಅವರು 2019ರ ಜನವರಿ 18 ರಂದು, ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಯಾಗಿ ನೇಮಕಗೊಂಡರು. ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸದೆ ನೇರವಾಗಿ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾದವರ ಸಾಲಿಗೆ ಜಸ್ಟೀಸ್ ಖನ್ನಾ ಸೇರ್ಪಡೆಯಾದರು.ನ್ಯಾಯಮೂರ್ತಿ ಖನ್ನಾ ಅವರು ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಮಧ್ಯಂತರ ಜಾಮೀನು ನೀಡುವುದು ಸೇರಿ ಹಲವು ಮಹತ್ವದ ತೀರ್ಪುಗಳನ್ನು ನೀಡಿದ್ದಾರೆ. ಈ ನಿರ್ಧಾರದಿಂದ ಕೇಜ್ರಿವಾಲ್ ಅವರು ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಪ್ರಚಾರ ಮಾಡಲು ಸಾಧ್ಯವಾಯಿತು.

ಇದೇ ರೀತಿ, ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಪ್ರಕರಣದಲ್ಲಿ ಜಸ್ಟೀಸ್ ಖನ್ನಾ ಅವರು, “ವಿಚಾರಣೆಯಲ್ಲಿನ ವಿಳಂಬವು ಮನಿ ಲಾಂಡರಿಂಗ್ ಆಕ್ಟ್ (ಪಿಎಂಎಲ್‌ಎ) ಪ್ರಕಾರ ಜಾಮೀನು ನೀಡಲು ಮಾನ್ಯವಾದ ಆಧಾರವಾಗಿ ಕಾರ್ಯನಿರ್ವಹಿಸುತ್ತದೆ” ಎಂದು ಒತ್ತಿ ಹೇಳಿದರು. ಸಿಸೋಡಿಯಾ ಅವರಿಗೆ ಜಾಮೀನು ಮಂಜೂರು ಮಾಡಿದ್ದರು.

Share with friends

Related Post

Leave a Reply

Your email address will not be published.