ಬಾಗಲಕೋಟೆ ಚರಂತಿಮಠದ ಶಿವಾನುಭವ ಮಂಟಪದಲ್ಲಿ ಭಾನುವಾರ ಪ್ರಸಕ್ತ ಹಿಂದುಳಿದ ದಲಿತ ಮತ್ತು ಸಮಗ್ರ ಹಿಂದೂ ಸಮಾಜದ ಸಮಸ್ಯೆಗಳು ಮತ್ತು ಸವಾಲುಗಳು ಕುರಿತು ಹಮ್ಮಿಕೊಂಡಿದ್ದ ಚಿಂತನ ಮಂಥನ ಸಭೆಯಲ್ಲಿ ಹೊಸ ಬ್ರಿಗೇಡ್ ಸ್ಥಾಪನೆಗೆ ನಿರ್ಣಯ ಕೈಗೊಳ್ಳಲಾಗಿದೆ.
ಈ ಸಂದರ್ಭದಲ್ಲಿ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಮಾತನಾಡಿ, ಇದು ಅತೃಪ್ತರ ಸಭೆ ಅಲ್ಲ. ದಲಿತ, ಹಿಂದುಳಿದ ಹಿಂದೂಗಳ ಹಕ್ಕುಗಳಿಗಾಗಿ ನಡೆಯುತ್ತಿರುವ ಹೋರಾಟವಾಗಿದೆ. ಮುಸ್ಲಿಂ, ಕ್ರಿಶ್ಚಿಯನ್ ರಿಗೆ ದೊರೆಯುತ್ತಿರುವ ಸರ್ಕಾರದ ಅನುದಾನ ಹಿಂದುಳಿದ ಮಠಗಳಿಗೂ ಸಿಗಬೇಕು. ರಾಜಕಾರಣ ನನ್ನ ವೈಯಕ್ತಿಕ ವಿಚಾರ. ಈ ಸಂಘಟನೆಯಲ್ಲಿ ಅದನ್ನು ಬೆರೆಸಲು ಹೋಗುವುದಿಲ್ಲ. ಭಾರತಾಂಬೆ ಬಂಜೆ ಅಲ್ಲ. ನಾವೆಲ್ಲ ಷಂಡರಲ್ಲ. ಈ ಹಿಂದೆ ರಾಯಣ್ಣ ಬ್ರಿಗೇಡ್ ಹಿರಿಯ ಮಾತಿಗೆ ಗೌರವ ಕೊಟ್ಟು ಹಿಂಪಡೆದುಕೊಂಡೆ. ಈ ಸಾರಿ ಹಾಗೇ ಆಗುವದಕ್ಕೆ ಬಿಡುವುದಿಲ್ಲ. ಪಕ್ಷ ನನಗೆ ಡಿಸಿಎಂ, 5 ಸಾರಿ ಶಾಸಕ, ವಿ.ಪ ಸದಸ್ಯ ಎಲ್ಲವನ್ನು ಮಾಡಿದೇ. ತಾಯಿ ಸ್ವರೂಪಿ ಪಕ್ಷಕ್ಕೆ ಕೆಲವರು ಕುತ್ತಿಗೆ ಹಿಚುಕುವ ಕೆಲಸ ಮಾಡುತ್ತಿದ್ದಾರೆ. ಹಿರಿಯರು ರಕ್ತ ಸುರಿಸಿ ಕಟ್ಟಿರುವ ಪಕ್ಷವನ್ನು ಹಾಳು ಮಾಡಲು ಬಿಡುವುದಿಲ್ಲ ಅಂತ ಗರ್ಜನೆ ಮಾಡಿದರು.