ಖರ್ಗೆ ಪ್ರತ್ಯೇಕ ಸಭೆ | ರಾಹುಲ್ ಗಾಂಧಿ ಜತೆ ಚರ್ಚೆ ಬಳಿಕ ನಿರ್ಧಾರನವದೆಹಲಿ: ಮುಖ್ಯಮಂತ್ರಿ ಸ್ಥಾನಕ್ಕಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ನಡುವೆ ಪ್ರಬಲ ಪೈಪೋಟಿ ಮುಂದುವರಿದಿದ್ದು, ಇಬ್ಬರೂ ನಾಯಕರು ಉನ್ನತ ಸ್ಥಾನಕ್ಕಾಗಿ ಬಿಗಿಪಟ್ಟು ಹಿಡಿದಿರುವುದರಿಂದ ಮಂಗಳವಾರವೂ ಅಂತಿಮ ತೀರ್ವನಕ್ಕೆ ಬರಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಾಧ್ಯವಾಗಿಲ್ಲ.ಮಂಗಳವಾರ ಮಧ್ಯಾಹ್ನ ದೆಹಲಿಗೆ ಬಂದ ಶಿವಕುಮಾರ್ ಸಂಜೆ ಐದು ಗಂಟೆ ವೇಳೆ ಖರ್ಗೆ ನಿವಾಸಕ್ಕೆ ತೆರಳಿದರು. ಕೊಟ್ಟರೆ ಸಿಎಂ ಸ್ಥಾನ ಕೊಡಿ. ಇಲ್ಲವಾದಲ್ಲಿ ನನಗೆ ಯಾವುದೇ ಅಧಿಕಾರ ಬೇಡ. ಬರೀ ಶಾಸಕನಾಗಿ ಮುಂದುವರಿಯುತ್ತೇನೆ ಎಂದು ಸ್ಪಷ್ಟಪಡಿಸಿ ಬಂದಿದ್ದಾರೆ.’ಮೊದಲ 3 ವರ್ಷ ನನ್ನನ್ನು ಸಿಎಂ ಮಾಡಿ. 2 ವರ್ಷ ಸಿದ್ದರಾಮಯ್ಯ ಅವರಿಗೆ ನೀಡಿ. ಆಗ ನಾನು ಸಂಘಟನೆ ಕಡೆ ಮರಳುತ್ತೇನೆ. ಜೈಲಿನಿಂದ ಬಂದು ಸವಾಲಿನ ಸನ್ನಿವೇಶದಲ್ಲಿ ಪಕ್ಷ ಬಲಗೊಳಿಸಿದ್ದು ನಾನು. ನಾನು ಎಲ್ಲಾ ಕಡೆ ಪ್ರವಾಸ ಮಾಡಿ, ಪಕ್ಷದ ಪರ ವಾತಾವರಣ ರೂಪಿಸಿದೆ. ಆದರೆ, ಸಿದ್ದರಾಮಯ್ಯ ಸಂಘಟನೆಗಾಗಿ ಏನು ಮಾಡಿದ್ದಾರೆ? ಈಗಾಗಲೇ ಸಿಎಂ ಸ್ಥಾನದಲ್ಲಿದ್ದು ಸಿದ್ದರಾಮಯ್ಯ 5 ವರ್ಷ ಅಧಿಕಾರ ಅನುಭವಿಸಿದ್ದಾರೆ. ಕಳೆದ 4 ವರ್ಷ ಪ್ರತಿಪಕ್ಷ ನಾಯಕ ಆಗಿದ್ದರು. ಆಗ ನಾವು ಅವರ ವಿರುದ್ಧ ಏನೂ ಮಾತನಾಡದೇ ಕೆಲಸ ಮಾಡಲು ಸಹಕಾರ ನೀಡಲಿಲ್ಲವೇ? ಸಿದ್ದರಾಮಯ್ಯ ನನ್ನಷ್ಟು ರಾಜ್ಯ ಪ್ರವಾಸ ಮಾಡಿಲ್ಲ. ಅವರಿಗೆ ಸರಿಯಾಗಿ ಕ್ಷೇತ್ರ ಆಯ್ಕೆ ಮಾಡಿಕೊಳ್ಳಲೂ ಸಾಧ್ಯ ಆಗಲಿಲ್ಲ. ಕೋಲಾರ ವಿಷಯದಲ್ಲಿ ವಿನಾಕಾರಣ ಗೊಂದಲ ಸೃಷ್ಟಿಸಿದ್ದರು’ ಎಂದು ಶಿವಕುಮಾರ್ ವಾದ ಮಂಡಿಸಿದರು.’ಈ ಚುನಾವಣೆಯಲ್ಲಿ ನನ್ನ ಕಾರಣದಿಂದ ಪ್ರಬಲ ಒಕ್ಕಲಿಗ, ಲಿಂಗಾಯತ ಸಮುದಾಯ ಪಕ್ಷದೊಟ್ಟಿಗೆ ಬಂದಿದೆ. ನಾನೇ ಸಿಎಂ ಆದರೆ ಲೋಕಸಭಾ ಚುನಾವಣೆಯಲ್ಲಿ ಯಾವ ರೀತಿ ಕೆಲಸ ಮಾಡುತ್ತೇನೆ’ ಎಂಬ ವಿವರಣೆ ನೀಡಿದರು.ಬಳಿಕ, ಸಿದ್ದರಾಮಯ್ಯ ಅವರನ್ನೂ ಕರೆಸಿಕೊಂಡ ಖರ್ಗೆ, ಅವರ ಅಭಿಪ್ರಾಯಗಳನ್ನು ಆಲಿಸಿದ್ದಾರೆ. ಇದು ನನ್ನ ಕೊನೆಯ ಚುನಾವಣೆ ಎಂದು ಮೊದಲೇ ಹೇಳಿದ್ದೆ. ಮತ್ತೊಂದು ಅವಕಾಶ ನೀಡಿದರೆ ರಾಜ್ಯದಲ್ಲಿ ಉತ್ತಮ ಆಡಳಿತ ನೀಡಬಲ್ಲೆ. ಮೇಲಾಗಿ, ಶಾಸಕರು ನನ್ನ ಬೆಂಬಲಕ್ಕೆ ನಿಂತಿರುವಾಗ ಅದನ್ನೇ ಅಂತಿಮ ಎಂದು ಪರಿಗಣಿಸಬೇಕು ಎಂದು ಹೇಳಿದ್ದಾರೆ.’ನನಗೆ ಸಿಎಂ ಸ್ಥಾನ ಕೊಟ್ಟರೆ 5 ವರ್ಷ ಸಂಪೂರ್ಣ ಕೊಡಿ. ಡಿಕೆಶಿಯನ್ನು ಬೇಕಿದ್ದರೆ ಡಿಸಿಎಂ ಮಾಡಿ. ಪಕ್ಷಕ್ಕಾಗಿ ನಾನೂ ದುಡಿದಿದ್ದೇನೆ. ಅಲ್ಪಸಂಖ್ಯಾತ, ಹಿಂದುಳಿದ, ದಲಿತ, ಲಿಂಗಾಯತ ಸೇರಿ ವಿವಿಧ ಸಮುದಾಯಗಳ ಬೆಂಬಲ ಸಿಗುವುದಕ್ಕೆ ನನ್ನ ಕೊಡುಗೆ ಇದೆ. ಹೀಗಿರುವಾಗ ನನಗೆ ಅವಕಾಶ ನೀಡದಿದ್ದರೆ ಕಾರ್ಯರ್ತರು, ಬೆಂಬಲಿಗರಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ, ಸಿಎಂ ಆಗಿದ್ದಾಗ, ವಿಪಕ್ಷ ನಾಯಕ ಆಗಿದ್ದಾಗ ಮಾಡಿರುವ ಸಾಧನೆ ನೋಡಿ. ಡಿಕೆಶಿ ಮೇಲೆ ಭ್ರಷ್ಟಾಚಾರ ಪ್ರಕರಣವಿದ್ದು, ಅವಕಾಶ ಕೊಟ್ಟರೆ ಬಿಜೆಪಿಯವರಿಗೆ ಅಸ್ತ್ರ ಕೊಟ್ಟಂತೆ ಆಗಲಿದೆ’ ಎಂದುಸಿದ್ದರಾಮಯ್ಯ ಪ್ರತಿಪಾದಿಸಿದರು.ಇದಕ್ಕೂ ಮುನ್ನ ಬೆಳಗ್ಗೆ ಖರ್ಗೆ ನಿವಾಸಕ್ಕೆ ಆಗಮಿಸಿದ ರಾಹುಲ್ ಗಾಂಧಿ, ನಾಯಕತ್ವ ವಿಷಯದಲ್ಲಿ ಉಂಟಾಗಿರುವ ಬಿಕ್ಕಟ್ಟಿನ ವಾಸ್ತವ ವರದಿಯನ್ನು ಪಡೆದುಕೊಂಡಿದ್ದಾರೆ. ಕರ್ನಾಟಕ ಮತ್ತೊಂದು ರಾಜಸ್ಥಾನ ಅಥವಾ ಛತ್ತೀಸ್ಗಢ ಆಗಬಾರದು. ಹೀಗಾಗಿ, ಸಿದ್ದರಾಮಯ್ಯ ಮತ್ತು ಡಿಕೆಶಿ ಇಬ್ಬರನ್ನೂ ಸರಿದೂಗಿಸಿಕೊಂಡು ಹೋಗುವ ಸೂತ್ರ ಕಂಡುಕೊಳ್ಳಿ ಎಂದು ಸಲಹೆ ನೀಡಿದರೆನ್ನಲಾಗಿದೆ.ಖರ್ಗೆ ಸಿಎಂ ಆಗಲಿನನ್ನನ್ನು ಮುಖ್ಯಮಂತ್ರಿ ಮಾಡುವುದಿಲ್ಲ ಎನ್ನುವುದಾದರೆ ನೀವೇ ಸಿಎಂ ಆಗಿ. ನಿಮ್ಮ ಜತೆ ಕೆಲಸ ಮಾಡಲು ನಾನು ಸಿದ್ಧನಿದ್ದೇನೆ ಎಂದು ಖರ್ಗೆಯವರಿಗೆ ಶಿವಕುಮಾರ್ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಆ ಮೂಲಕ ತಾವು ಯಾವುದೇ ಕಾರಣಕ್ಕೂ ಸಿದ್ದರಾಮಯ್ಯ ಜತೆ ಕೆಲಸ ಮಾಡುವುದಿಲ್ಲ ಎನ್ನುವುದನ್ನು ಮತ್ತೊಮ್ಮೆ ಒತ್ತಿ ಹೇಳಿದ್ದಾರೆ. ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ನಮ್ಮ ನಾಯಕನ ಪರ ಇದ್ದಾರೆ ಎಂಬ ವಿಶ್ವಾಸ ಡಿಕೆಶಿ
ಬೆಂಬಲಿಗರದ್ದಾಗಿದೆ.ಶಿವಕುಮಾರ್ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ. ಶ್ರಮಕ್ಕೆ ಪ್ರತಿಫಲವನ್ನ ಕೇಳುತ್ತಿದ್ದೇವೆ. ಯಾರೂ ಹೊಣೆ ಹೊತ್ತುಕೊಳ್ಳಲು ಮುಂದಾಗದೆ ಇದ್ದಾಗ ಡಿಕೆಶಿ ಮುಂದೆ ಬಂದರು. ಡಿಕೆಶಿ ವಿರುದ್ಧದ ಕೇಸ್ ರಾಜಕೀಯ ಪ್ರೇರಿತ. ಅವರ ಜೀವನವೇ ತೆರೆದ ಪುಸ್ತಕ..ಕೆ. ಸುರೇಶ್, ಕಾಂಗ್ರೆಸ್ ಸಂಸದಸಿದ್ದರಾಮಯ್ಯ ಸಿಡಿಮಿಡಿಮುಖ್ಯಮಂತ್ರಿ ಸ್ಥಾನವನ್ನು ಎರಡು ಅವಧಿಗೆ ಹಂಚಿಕೆ ಮಾಡುವ ಸೂತ್ರವನ್ನು ಹೈಕಮಾಂಡ್ ಸಿದ್ದರಾಮಯ್ಯ ಮುಂದಿಟ್ಟಿದೆ. ಇದಕ್ಕೆ ಸಿದ್ದರಾಮಯ್ಯ ಬಿಲ್ಕುಲ್ ಒಪ್ಪಿಲ್ಲ. ನೀವು ಬೇಕಿದ್ದರೆ ಡಿಕೆಶಿಯನ್ನು ಡಿಸಿಎಂ ಮಾಡಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ. ಜತೆಗೆ ತಮಗೇಕೆ ಸಿಎಂ ಸ್ಥಾನ ಕೊಡಬೇಕೆಂಬ ವಾದ ಮಂದಿಟ್ಟಿದ್ದಾರೆ.ಖರ್ಗೆ ಭೇಟಿ ಬಳಿಕ ಮಾಧ್ಯಮದವರು ಪ್ರತಿಕ್ರಿಯೆ ಬಯಸಿದಾಗ ಸಿದ್ದರಾಮಯ್ಯ ಅಸಹನೆ ವ್ಯಕ್ತಪಡಿಸಿದ್ದಾರೆ. ಒಮ್ಮೆ ಸುದ್ದಿವಾಹಿನಿ ಮೈಕ್ಗಳನ್ನು ಬದಿಗೆ ಸರಿಸಿದರೆ ಮತ್ತೊಮ್ಮೆ ಪ್ರತಿಕ್ರಿಯೆ ಪಡೆಯಲು ಮುಂದಾದಾಗ ಸಿಟ್ಟಿನಿಂದ ಗದರಿದರು.ಮತ್ತೊಂದು ಸುತ್ತಿನ ಪ್ರಯತ್ನಮತ್ತೆ ಶಾಸಕರ ಅಭಿಪ್ರಾಯ ಸಂಗ್ರಹಕ್ಕೆ ಕೋರಿಕೆ ಇಡಬೇಕೆಂಬ ಬಗ್ಗೆ ಸಿದ್ದರಾಮಯ್ಯ ಪಾಳಯದಲ್ಲಿ ಚರ್ಚೆಯಾಗಿದೆ. ಎಐಸಿಸಿ ವೀಕ್ಷಕರು ಬೆಂಗಳೂರಿಗೆ ಆಗಮಿಸಿ ಶಾಸಕರ ಅಭಿಪ್ರಾಯ ಸಂಗ್ರಹಿಸಿ, ವರದಿಯನ್ನು ಹೈಕಮಾಂಡ್ಗೆ ನೀಡಿದ್ದಾರೆ. ಈ ವರದಿಯ ಆಧಾರದಲ್ಲಿ ಸಿದ್ದರಾಮಯ್ಯಗೆ ಸಿಎಂ ಪಟ್ಟ ಒಲಿಯಬೇಕಿತ್ತು, ಆದರೆ, ಅವಕಾಶ ನೀಡುತ್ತಿಲ್ಲ. ಹೀಗಾಗಿ ಇನ್ನೊಮ್ಮೆ ಪಕ್ಷದ ಪ್ರಮುಖರ ಸಮ್ಮುಖವೇ ಎಲ್ಲ 135 ಶಾಸಕರೂ ಲಿಖಿತವಾಗಿ ಅಭಿಪ್ರಾಯ ನೀಡಲಿ, ಎಲ್ಲರೆದುರಲ್ಲೇ ಅದರ ಪರಿಶೀಲನೆ ನಡೆದು ಹೆಚ್ಚು ಶಾಸಕರು ಯಾರ ಪರ ಇದ್ದಾರೋ ಅವರಿಗೆ ಅವಕಾಶ ಕೊಡಲಿ ಎಂದು ಸಿದ್ದರಾಮಯ್ಯ ಪರ ಶಾಸಕರು ವಾದ ಮುಂದಿಡಲು ಬಯಸಿದ್ದಾರೆ.ಡಿಕೆ ನೆರವಿಗೆ ಪಿಸಿಸಿ ಅಧ್ಯಕ್ಷರುಡಿ.ಕೆ. ಶಿವಕುಮಾರ್ ನೆರವಿಗೆ ವಿವಿಧ ರಾಜ್ಯಗಳ ಕಾಂಗ್ರೆಸ್ ಘಟಕದ ಅಧ್ಯಕ್ಷರು ಆಗಮಿಸಿದ್ದಾರೆ. ಬಹಿರಂಗವಾಗಿಯೇ ಅಭಿಪ್ರಾಯ ನೀಡಿದ್ದು, ಪಕ್ಷದ ನಾಯಕರ ಬಳಿಯೂ ಚರ್ಚೆ ನಡೆಸಿ ಡಿ.ಕೆ. ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡುವಂತೆ ಒತ್ತಡ ತಂದಿರುವ ಬೆಳವಣಿಗೆ ನಡೆದಿದೆ. ಪಕ್ಷದ ಹಿರಿಯ ನಾಯಕರಾದ ಪಿ. ಚಿದಂಬರಂ, ಜೈರಾಮ್ ರಮೇಶ್ ಸೇರಿದಂತೆ ಹಲವು ನಾಯಕರು ಡಿಕೆಶಿ ಪರ ಒಲವು ವ್ಯಕ್ತಪಡಿಸಿ ಪ್ರಧಾನ ಕಾರ್ಯದರ್ಶಿಗಳೊಂದಿಗೆ ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.ತಮಗೇಕೆ ಸಿಎಂ ಸ್ಥಾನ ಕೊಡಬೇಕೆಂದು ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಪ್ರತ್ಯೇಕ ವಾದ ಮುಂದಿಟ್ಟಿದ್ದಾರೆ. ತಾವೇನು ಮಾಡಿದ್ದೇವೆ, ಪಕ್ಷಕ್ಕೆ ಯಾವ ರೀತಿ ಅನುಕೂಲವಾಗಿದೆ, ಸರ್ಕಾರ ಬರಲು ತಮ್ಮದೇನು ಕೊಡುಗೆ ಇದೆ ಎಂದು ವಿವರವಾದ ವರದಿಯನ್ನು ಖರ್ಗೆಯವರ ಕೈಗಿಟ್ಟಿರುವುದು ವಿಶೇಷ.ಕನ್ನಡ ಮ್ಯಾಟ್ರಿಮೊನಿಯಲ್ಲಿ ಪರಿಪೂರ್ಣ ಸಂಗಾತಿ ಹುಡುಕಿಕೊಳ್ಳಿ – ನೋಂದಣಿ ಉಚಿತ!