ನವದೆಹಲಿ (ನ.23): ಇಂದು ಮಹಾರಾಷ್ಟ್ರ, ಜಾರ್ಖಂಡ್ ವಿಧಾನಸಭೆ ಮಾತ್ರವಲ್ಲದೆ, ದೇಶದ 15 ರಾಜ್ಯಗಳಲ್ಲಿ 46 ವಿಧಾನಸಭೆ ಹಾಗೂ 2 ಲೋಕಸಭೆ ಸ್ಥಾನಗಳಿಗೆ ನಡೆದ ಉಪಚುನಾವಣೆಯ ಫಲಿತಾಂಶ ಕೂಡ ಪ್ರಕಟವಾಗಿದೆ. ಪ್ರಿಯಾಂಕಾ ಗಾಂಧಿ ವಯನಾಡ್ ಲೋಕಸಭಾ ಕ್ಷೇತ್ರದಲ್ಲಿ 4 ಲಕ್ಷ ಮತಗಳ ಅಂತರದಿಂದ ಗೆದ್ದು ಇದೇ ಮೊದಲ ಬಾರಿಗೆ ಲೋಕಸಭೆಗೆ ಕಾಲಿಡಲಿದ್ದಾರೆ.
ಇಲ್ಲಿ ಸಿಪಿಐನ ಸತ್ಯನ್ ಮೋಕೆರಿ 2ನೇ ಸ್ಥಾನ ಪಡೆದುಕೊಂಡಿದ್ದರೆ, ಬಿಜೆಪಿಯ ನವ್ಯಾ ಹರಿದಾಸ್ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ಕಾಂಗ್ರೆಸ್‌ನಿಂದ ಬಿಜೆಪಿ ಸೇರಿದ ಅರಣ್ಯ ಸಚಿವ ರಾಮನಿವಾಸ್ ರಾವತ್ ಮಧ್ಯಪ್ರದೇಶದ ವಿಜಯಪುರ ಕ್ಷೇತ್ರದಲ್ಲಿ ಸೋಲು ಕಂಡಿದ್ದಾರೆ. ಉತ್ತರ ಪ್ರದೇಶದ 9 ವಿಧಾನಸಭಾ ಸ್ಥಾನಗಳ ಪೈಕಿ ಬಿಜೆಪಿ ಮೈತ್ರಿಕೂಟ 7 ಸ್ಥಾನಗಳನ್ನು ಗೆದ್ದಿದ್ದರೆ, ಎಸ್‌ಪಿ 2 ಸ್ಥಾನಗಳನ್ನು ಗೆದ್ದಿದೆ.46 ಸ್ಥಾನಗಳ ಮತ ಎಣಿಕೆಯಲ್ಲಿ ಬಿಜೆಪಿ ಮೈತ್ರಿಕೂಟ 24, ಕಾಂಗ್ರೆಸ್ 7, ಟಿಎಂಸಿ 6, ಎಸ್‌ಪಿ 3, ಎಎಪಿ 3, ಸಿಪಿಐ-ಎಂ, ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ) ಮತ್ತು ಭಾರತ್ ಆದಿವಾಸಿ ಪಕ್ಷ ತಲಾ 1 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಬಿಜೆಪಿ ಮೈತ್ರಿಕೂಟದಲ್ಲಿ ಜೆಡಿಯು, ಹಿಂದೂಸ್ತಾನ್ ಅವಾಮ್ ಮೋರ್ಚಾ (ಎಚ್‌ಎಎಂ), ಅಸ್ಸಾಂ ಗಣ ಪರಿಷತ್ (ಎಜಿಪಿ), ಯುನೈಟೆಡ್ ಪೀಪಲ್ಸ್ ಪಾರ್ಟಿ (ಯುಪಿಪಿ) ಮತ್ತು ರಾಷ್ಟ್ರೀಯ ಲೋಕದಳ (ಆರ್‌ಎಲ್‌ಡಿ) ಸೇರಿವೆ.ಚುನಾವಣೆಗೂ ಮುನ್ನ ಈ 46 ಸ್ಥಾನಗಳ ಪೈಕಿ 27 ಸ್ಥಾನಗಳನ್ನು ಪ್ರತಿಪಕ್ಷಗಳು ಆಕ್ರಮಿಸಿಕೊಂಡಿದ್ದವು. ಈ ಪೈಕಿ 13 ಸ್ಥಾನಗಳನ್ನು ಕಾಂಗ್ರೆಸ್ ಮಾತ್ರ ಹೊಂದಿತ್ತು. ಅದೇ ಸಮಯದಲ್ಲಿ, ಎನ್‌ಡಿಎ ಬಿಜೆಪಿಯ 11 ಸ್ಥಾನಗಳು ಸೇರಿದಂತೆ ಒಟ್ಟು 17 ಸ್ಥಾನಗಳನ್ನು ಹೊಂದಿತ್ತು.