23 ವರ್ಷದ ರೋಶನಿ ಹತ್ಯೆಯಾದ ನವ ವಿವಾಹಿತೆಯಾಗಿದ್ದು, ಈಕೆ ಬಿಹಾರದ ಕಥಿಹಾರ್ ಜಿಲ್ಲೆಯ ಪೋತಿಯಾದಲ್ಲಿರುವ ತನ್ನ ಪತಿ ಮನೆ ಮುಂದೆ ಕುಳಿತಿದ್ದಾಗ ಬೈಕಿನಲ್ಲಿ ಬಂದ ದುಷ್ಕರ್ಮಿಗಳು ಆಕೆಯ ಮೇಲೆ ಗುಂಡು ಹಾರಿಸಿದ್ದಾರೆ.
ಆಕೆ ತಪ್ಪಿಸಿಕೊಳ್ಳಲು ಯತ್ನಿಸಿದರೂ ಸಾಧ್ಯವಾಗಿಲ್ಲ.
ತೀವ್ರವಾಗಿ ಗಾಯಗೊಂಡಿದ್ದ ರೋಶನಿಯನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ. ರೋಶನಿ, ಬಿಹಾರದ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಕಾರ್ತಿಕ್ ಮಂಡಲ್ ಎಂಬವರನ್ನು ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದು, ಇವರಿಬ್ಬರು 10 ದಿನಗಳ ಹಿಂದಷ್ಟೇ ವಿವಾಹವಾಗಿದ್ದರು.
ಆದರೆ ಈ ಮದುವೆ ಕಾರ್ತಿಕ್ ತಾಯಿಗೆ ಇಷ್ಟವಿರಲಿಲ್ಲವೆಂದು ಹೇಳಲಾಗಿದ್ದು, ಜೊತೆಗೆ ಮದುವೆ ಸಂದರ್ಭದಲ್ಲಿ 5 ಲಕ್ಷ ರೂಪಾಯಿ ವರದಕ್ಷಿಣೆ ನೀಡುವಂತೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಮೃತ ಯುವತಿಯ ಕುಟುಂಬಸ್ಥರು ಆಕೆಯ ಅತ್ತೆಯ ಮೇಲೆ ಸಂಶಯ ವ್ಯಕ್ತಪಡಿಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.