Bangladesh ; ಶೇಖ್ ಹಸೀನಾ ಬಂಧನಕ್ಕೆ ಗಡುವು ವಿಧಿಸಿದ ನ್ಯಾಯಮಂಡಳಿ

ಬಾಂಗ್ಲಾದೇಶದ ಅಂತಾರಾಷ್ಟ್ರೀಯ ಅಪರಾಧಗಳ ನ್ಯಾಯಮಂಡಳಿಯು ಗುರುವಾರ( ಅ17) ಮಾಜಿ ಪ್ರಧಾನಿ ಶೇಖ್ ಹಸೀನಾ ಸೇರಿದಂತೆ 45 ಮಂದಿ ಇತರರ ವಿರುದ್ಧ ಬಂಧನ ವಾರಂಟ್ ಹೊರಡಿಸಿದೆ.

ಇತ್ತೀಚಿನ ಸಾಮೂಹಿಕ ವಿದ್ಯಾರ್ಥಿ ಚಳವಳಿಯ ಸಂದರ್ಭದಲ್ಲಿ ಮಾನವೀಯತೆಯ ವಿರುದ್ಧದ ಅಪರಾಧಗಳಿಗೆ ಸಂಬಂಧಿಸಿದಂತೆ ಅವಾಮಿ ಲೀಗ್‌ನ ಉನ್ನತ ನಾಯಕರ ಮೇಲೆ ಬಂಧನ ವಾರಂಟ್ ಹೊರಡಿಸಲಾಗಿದೆ.

ಬಂಧನ ವಾರಂಟ್‌ಗಳನ್ನು ಕೋರಿ ಪ್ರಾಸಿಕ್ಯೂಷನ್ ನ್ಯಾಯಮಂಡಳಿಗೆ ಎರಡು ಅರ್ಜಿಗಳನ್ನು ಸಲ್ಲಿಸಿದ ನಂತರ ನ್ಯಾಯಮೂರ್ತಿ ಎಂಡಿ ಗೋಲಂ ಮೊರ್ತುಜಾ ಮಜುಂದಾರ್ ನೇತೃತ್ವದ ನ್ಯಾಯಮಂಡಳಿ ಈ ಆದೇಶವನ್ನು ನೀಡಿದೆ ಎಂದು ಮುಖ್ಯ ಪ್ರಾಸಿಕ್ಯೂಟರ್ ಮುಹಮ್ಮದ್ ತಾಜುಲ್ ಇಸ್ಲಾಂ ಹೇಳಿರುವುದಾಗಿ ಡೈಲಿ ಸ್ಟಾರ್ ವರದಿ ಮಾಡಿದೆ.

ಹಸೀನಾ ಸೇರಿದಂತೆ 46 ಮಂದಿಯನ್ನು ನವೆಂಬರ್ 18 ರೊಳಗೆ ಬಂಧಿಸಿ ತನ್ನ ಮುಂದೆ ಹಾಜರುಪಡಿಸುವಂತೆ ನ್ಯಾಯಪೀಠವು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದೆ ಎಂದು ವರದಿ ಮಾಡಲಾಗಿದೆ.ಆಗಸ್ಟ್‌ನಲ್ಲಿ, ಬಾಂಗ್ಲಾದೇಶದ ಮಧ್ಯಂತರ ಸರಕಾರವು ಅಂತಾರಾಷ್ಟ್ರೀಯ ಅಪರಾಧಗಳ ನ್ಯಾಯಮಂಡಳಿಯಲ್ಲಿ ಹಸೀನಾ ನೇತೃತ್ವದ ಸರಕಾರದ ವಿರುದ್ಧ ವಿದ್ಯಾರ್ಥಿಗಳ ಇತ್ತೀಚಿನ ಸಾಮೂಹಿಕ ಚಳವಳಿಯ ಸಂದರ್ಭದಲ್ಲಿ ಹತ್ಯೆಗಳಲ್ಲಿ ಭಾಗಿಯಾಗಿರುವವರನ್ನು ವಿಚಾರಣೆಗೆ ಒಳಪಡಿಸುವುದಾಗಿ ಹೇಳಿದೆ.ಜುಲೈ ಮಧ್ಯದಲ್ಲಿ ಸರಕಾರಿ ಉದ್ಯೋಗಗಳಲ್ಲಿ ವಿವಾದಾತ್ಮಕ ಕೋಟಾ ವ್ಯವಸ್ಥೆಯ ವಿರುದ್ಧ ವಿದ್ಯಾರ್ಥಿಗಳು ನಡೆಸಿದ ಬೃಹತ್ ಪ್ರತಿಭಟನೆ, ಹಸೀನಾ ಸರಕಾರದ ಪತನದ ನಂತರ ದೇಶಾದ್ಯಂತ ಭುಗಿಲೆದ್ದ ಹಿಂಸಾಚಾರದಲ್ಲಿ ಬಾಂಗ್ಲಾದೇಶದಲ್ಲಿ ಸಾವನ್ನಪ್ಪಿದವರ ಸಂಖ್ಯೆ 600 ಕ್ಕೂ ಹೆಚ್ಚು ಎಂದು ತಿಳಿದು ಬಂದಿದೆ

Share with friends

Related Post

Leave a Reply

Your email address will not be published.