ಸಂಕ್ರಾಂತಿ ದಿನ ಹೊಸ ಬ್ರಿಗೇಡ್ ಸ್ಥಾಪನೆ: ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ

(ಅ.21): ಇದು ಅತೃಪ್ತರ ಸಭೆ ಅಲ್ಲ, ಇದು ಸಾಧುಸಂತರ ಭಕ್ತರ ಸಭೆ. ಸಂತೃಪ್ತಿಯಿಂದ ಹಿಂದುತ್ವವನ್ನು ರಾಜ್ಯದಲ್ಲಿ ಹರಿಡಿಸಲು ಹೊರಟಿರುವ ಸಭೆ ಇದಾಗಿದೆ. ಹಿಂದುಳಿದ ಹಾಗೂ ದಲಿತ ಹಿಂದುಗಳ ಸಂಘಟನೆ, ಮಠಗಳ ಏಳಿಗೆಗಾಗಿ ಜನವರಿ 14 ರಂದು ಕೂಡಲಸಂಗಮದಲ್ಲಿ ಬೃಹತ್ ಸಮಾವೇಶ ನಡೆಸಿ ಸಂಕ್ರಾಂತಿ ದಿನ ಹೊಸ ಬ್ರಿಗೇಡ್ ಸ್ಥಾಪನೆ ಮಾಡಲಾಗುವುದು ಎಂದು ಸಭೆಯಲ್ಲಿ ಘೋಷಣೆ ಮಾಡಲಾಯಿತು.

ಬಾಗಲಕೋಟೆ ಚರಂತಿಮಠದ ಶಿವಾನುಭವ ಮಂಟಪದಲ್ಲಿ ಭಾನುವಾರ ಪ್ರಸಕ್ತ ಹಿಂದುಳಿದ ದಲಿತ ಮತ್ತು ಸಮಗ್ರ ಹಿಂದೂ ಸಮಾಜದ ಸಮಸ್ಯೆಗಳು ಮತ್ತು ಸವಾಲುಗಳು ಕುರಿತು ಹಮ್ಮಿಕೊಂಡಿದ್ದ ಚಿಂತನ ಮಂಥನ ಸಭೆಯಲ್ಲಿ ಹೊಸ ಬ್ರಿಗೇಡ್ ಸ್ಥಾಪನೆಗೆ ನಿರ್ಣಯ ಕೈಗೊಳ್ಳಲಾಗಿದೆ.

ಈ ಸಂದರ್ಭದಲ್ಲಿ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಮಾತನಾಡಿ, ಇದು ಅತೃಪ್ತರ ಸಭೆ ಅಲ್ಲ. ದಲಿತ, ಹಿಂದುಳಿದ ಹಿಂದೂಗಳ ಹಕ್ಕುಗಳಿಗಾಗಿ ನಡೆಯುತ್ತಿರುವ ಹೋರಾಟವಾಗಿದೆ. ಮುಸ್ಲಿಂ, ಕ್ರಿಶ್ಚಿಯನ್ ರಿಗೆ ದೊರೆಯುತ್ತಿರುವ ಸರ್ಕಾರದ ಅನುದಾನ ಹಿಂದುಳಿದ ಮಠಗಳಿಗೂ ಸಿಗಬೇಕು. ರಾಜಕಾರಣ ನನ್ನ ವೈಯಕ್ತಿಕ ವಿಚಾರ. ಈ ಸಂಘಟನೆಯಲ್ಲಿ ಅದನ್ನು ಬೆರೆಸಲು ಹೋಗುವುದಿಲ್ಲ. ಭಾರತಾಂಬೆ ಬಂಜೆ ಅಲ್ಲ. ನಾವೆಲ್ಲ ಷಂಡರಲ್ಲ. ಈ ಹಿಂದೆ ರಾಯಣ್ಣ ಬ್ರಿಗೇಡ್ ಹಿರಿಯ ಮಾತಿಗೆ ಗೌರವ ಕೊಟ್ಟು ಹಿಂಪಡೆದುಕೊಂಡೆ. ಈ ಸಾರಿ ಹಾಗೇ ಆಗುವದಕ್ಕೆ ಬಿಡುವುದಿಲ್ಲ. ಪಕ್ಷ ನನಗೆ ಡಿಸಿಎಂ, 5 ಸಾರಿ ಶಾಸಕ, ವಿ.ಪ ಸದಸ್ಯ ಎಲ್ಲವನ್ನು ಮಾಡಿದೇ. ತಾಯಿ ಸ್ವರೂಪಿ ಪಕ್ಷಕ್ಕೆ ಕೆಲವರು ಕುತ್ತಿಗೆ ಹಿಚುಕುವ ಕೆಲಸ ಮಾಡುತ್ತಿದ್ದಾರೆ. ಹಿರಿಯರು ರಕ್ತ ಸುರಿಸಿ ಕಟ್ಟಿರುವ ಪಕ್ಷವನ್ನು ಹಾಳು ಮಾಡಲು ಬಿಡುವುದಿಲ್ಲ ಅಂತ ಗರ್ಜನೆ ಮಾಡಿದರು.

Share with friends

Related Post

Leave a Reply

Your email address will not be published.