ಮೈಸೂರಿನ ಮುಡಾ ಕಚೇರಿ ಮೇಲೆ ಜಾರಿ ನಿರ್ದೇಶನಾಲಯ ಶುಕ್ರವಾರ ಧಿಡೀರ್ ದಾಳಿ ನಡೆಸಿದ್ದು, ಮೊದಲು ನಮಗೆ ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಸಿದ್ದರಾಮಯ್ಯ ಅವರ ನಿವೇಶನಗಳ ಮೂಲ ದಾಖಲೆ ಕೊಡಿ ಎಂದು ಮುಡಾ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.ಸುಮಾರು 8 ಅಧಿಕಾರಿಗಳು ಆಗಮಿಸಿದ್ದು, ಮುಡಾ ಆಯುಕ್ತ ರಘುನಂದನ್ ಅವರಿಂದ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಮುಡಾದಲ್ಲಿ ನಡೆದಿರುವ 50:50 ಹಗರಣದ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಮುಡಾ ಸೈಟು ಹಂಚಿಕೆಯಲ್ಲಿ ಸಾವಿರಾರು ಕೋಟಿ ಹಣಕಾಸಿನ ಅವ್ಯವಹಾರ ನಡೆದಿದೆ ಎಂದು ಇ.ಡಿ.ಗೆ ಸ್ನೇಹಮಯಿ ಕೃಷ್ಣ ದೂರು ಸಲ್ಲಿಸಿದ್ದರು.ಪಾರ್ವತಿ ಸಿದ್ದರಾಮಯ್ಯ ಅವರ ಮೂಲ ದಾಖಲಾತಿ ಕೇಳಿದಾಗ, ನಕಲು ಪ್ರತಿ ಸಾಕೇ ಎಂದು ಮುಡಾ ಅಧಿಕಾರಿಗಳು ನುಣುಚಿಕೊಳ್ಳಲು ಯತ್ನಿಸಿದ್ದಾರೆಂದು ವರದಿಯಾಗಿದೆ. ಈ ವೇಳೆ ನಮಗೆ ಮೂಲ ದಾಖಲೆಯೇ ಬೇಕು ಪಟ್ಟು ಹಿಡಿದಿರುವ ಇ.ಡಿ. ಅಧಿಕಾರಿಗಳು, ಪಾರ್ವತಿ ಸಿದ್ದರಾಮಯ್ಯ ಕೇಸ್ ಸಂಬಂಧ 2004 ರಿಂದ 2023ರವರಗಿನ ಮೂಲ ದಾಖಲೆ ತಕ್ಷಣ ಒದಗಿಸಿ ಎಂದು ತಾಕೀತು ಮಾಡಿದ್ದಾರೆ. ಜೊತೆಗೆ, ಮುಡಾ ಕಾರ್ಯದರ್ಶಿ ಪ್ರಸನ್ನ ಕುಮಾರ್ ಅವರನ್ನ ದಾಖಲೆ ತರಲು ಹೊರಗೆ ಕಲುಹಿಸಿದ ಅಧಿಕಾರಿಗಳು, 50:50 ವಿಚಾರ ಏನು, ಇಲ್ಲಿಯವರೆಗೆ ಎಷ್ಟು ಸೈಟ್ ಗಳು ಹಂಚಿಕೆಯಾಗಿದೆ ಎಂದು ಪರಿಶೀಲನೆ ನಡೆಸುತ್ತಿದ್ದಾರೆ.