ಬೆಂಗಳೂರು ಗಳೂರು: ಮುಡಾ, ಇ.ಡಿ. ಗದ್ದಲದ ಮಧ್ಯೆಯೇ ರಾಜ್ಯ ಸರಕಾರವು ಸದ್ದಿಲ್ಲದೆ ಗ್ಯಾರಂಟಿ ಯೋಜನೆಗಳ ಪರಿಷ್ಕರಣೆಗೆ ಮುಂದಾಗಿದ್ದು, ಅರ್ಹರು ಹಾಗೂ ಅಗತ್ಯ ಇರುವವರನ್ನು ಮಾತ್ರ ಫಲಾನುಭವಿಗಳ ಪಟ್ಟಿಯಲ್ಲಿ ಉಳಿಸಲು ಚಿಂತನೆ ನಡೆಸಿದೆ. ಆ ಮೂಲಕ ವೆಚ್ಚ ಕಡಿತಕ್ಕೆ ಮುಂದಾಗಿದೆ.ರಾಜ್ಯದ ಹಣಕಾಸು ಪರಿಸ್ಥಿತಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪರಾ ಮರ್ಶೆಗೆ ಸಂಬಂಧಪಟ್ಟಂತೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಹಣಕಾಸು ಇಲಾಖೆಯ ಹಿರಿಯ ಅಧಿಕಾರಿಗಳ ಜತೆಗೆ ಶುಕ್ರ ವಾರ ಸಭೆ ನಡೆಸಿದ್ದು, ವೆಚ್ಚ ಕಡಿತದ ಬಗ್ಗೆ ಸುದೀರ್ಘ ಚರ್ಚೆ ನಡೆದಿದೆ. ಅನರ್ಹ ಬಿಪಿಎಲ್ ಕಾರ್ಡ್ಗಳನ್ನು ರದ್ದು ಪಡಿಸು ವಂತೆ ಸಿಎಂ ಸಿದ್ದರಾಮಯ್ಯ ಅಧಿ ಕಾರಿ ಗಳಿಗೆ ಸೂಚನೆ ನೀಡಿದ್ದಾರೆ. ಕಟ್ಟು ನಿಟ್ಟಾಗಿ ಈ ಕೆಲಸ ಮಾಡಬೇಕು. ಅಗತ್ಯ ಇರುವವರಿಗೆ ಮಾತ್ರ ಗ್ಯಾರಂಟಿ ಯೋಜನೆ ಗಳು ತಲುಪಲಿ. ಬಿಪಿಎಲ್ ಕಾರ್ಡ್ ಮಾನದಂಡ ವಾಗಿಟ್ಟುಕೊಂಡು ಅನರ್ಹ ರಿಗೂ ಗ್ಯಾರಂಟಿ ನೀಡಲಾಗುತ್ತಿದೆ. ಇದೆಲ್ಲ ದಕ್ಕೂ ಕಡಿವಾಣ ಹಾಕಿ ವೆಚ್ಚ ಕಡಿಮೆ ಮಾಡಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಹಣಕಾಸು ಇಲಾಖೆಯ ಮೂಲಗಳಿಂದ ತಿಳಿದು ಬಂದಿದೆ.ಸಂಪನ್ಮೂಲ ಕೊರತೆಕಳೆದ ವರ್ಷದಂತೆ ಈ ಬಾರಿಯೂ ವಿವಿಧ ಇಲಾಖೆಗಳ ಮೂಲಕ ಸಂಪನ್ಮೂಲ ಸಂಗ್ರಹಣೆಯಲ್ಲಿ ರಾಜ್ಯ ಸರಕಾರವು ಮತ್ತೆ ಕೊರತೆ ಎದುರಿಸುತ್ತಿದೆ.ಎಲ್ಲ ಬಾಬ್ತುಗಳಿಂದ ನೀಡಿದ ಗುರಿಯ ಪೈಕಿ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 4ರಷ್ಟು ಸಂಪನ್ಮೂಲ ಸಂಗ್ರಹಣೆಯಲ್ಲಿ ಹಿನ್ನಡೆಯಾಗಿದೆ. ಅಕ್ಟೋಬರ್ ಅಂತ್ಯಕ್ಕೆ ನಿಗದಿತ ಗುರಿಯಲ್ಲಿ ಶೇ. 48 ಸಂಪನ್ಮೂಲಗಳು ಸಂಗ್ರಹವಾಗಬೇಕು. ಆದರೆ ಇದುವರೆಗೆ ಶೇ. 44 ಮಾತ್ರ ಸಂಗ್ರಹವಾಗಿದೆ. ಹೀಗಾಗಿ ಮುಂದಿನ 6 ತಿಂಗಳುಗಳಲ್ಲಿ ರಾಜಸ್ವ ಕೊರತೆ ನೀಗಿಸಿಕೊಳ್ಳುವಂತೆ ಎಲ್ಲ ಕರ ಸಂಗ್ರಹ ಇಲಾಖೆ ಮುಖ್ಯಸ್ಥರಿಗೆ ಸೂಚನೆ ನೀಡಲಾಗಿದೆ.ಎಲ್ಲ ಇಲಾಖೆ ಜತೆಗೆ ಸಭೆಸಂಪನ್ಮೂಲ ಸಂಗ್ರಹಣೆಯಲ್ಲಿ ಕೊರತೆ ಕಂಡು ಬಂದಿರುವ ಹಿನ್ನೆಲೆಯಲ್ಲಿ ಈ ಮಾಸಾಂತ್ಯಕ್ಕೆ ಅಬಕಾರಿ, ನೋಂದಣಿ ಮತ್ತು ಮುದ್ರಾಂಕ, ವಾಣಿಜ್ಯ ತೆರಿಗೆ, ಗಣಿ ಮತ್ತು ಭೂ ವಿಜ್ಞಾನ, ಸಾರಿಗೆ ಸಹಿತ ಎಲ್ಲ ತೆರಿಗೆ ಸಂಗ್ರಹಣಾ ಇಲಾಖೆ ಜತೆಗೆ ಸಭೆ ಆಯೋಜಿಸುವಂತೆಯೂ ಸಿದ್ದರಾಮಯ್ಯ ಈ ಸಂದರ್ಭದಲ್ಲಿ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.