SSLC’ ಫೇಲಾದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ಕ್ಲಾಸ್ ಗೆ ಬರುವವರಿಗೆ `ಸಮವಸ್ತ್ರ, ಪಠ್ಯಪುಸ್ತಕ, ಶೂ ಸಾಕ್ಸ್’ ವಿತರಣೆ!

ರಾಜ್ಯದ ಸರ್ಕಾರಿ ಪ್ರೌಢಶಾಲೆಗಳಲ್ಲಿ 10 ನೇ ತರಗತಿಗೆ ಮರು ದಾಖಲಾತಿ ಪಡೆದ ವಿದ್ಯಾರ್ಥಿಗಳಿಗೆ ನಿಯಮಾನುಸಾರ ಸರ್ಕಾರದಿಂದ ನೀಡುವ ಸಮವಸ್ತ್ರ, ಪಠ್ಯಪುಸ್ತಕ, ಶೂ ಸಾಕ್ಸ್. ಅಕ್ಷರ ದಾಸೋಹ, ಇತರೆ ಸೌಲಭ್ಯಗಳನ್ನು ನೀಡಲಾಗುವುದು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ರಾಜ್ಯದಲ್ಲಿ ರಾಜ್ಯ ಪಠ್ಯಕ್ರಮದ ಶಾಲೆಗಳಲ್ಲಿ 10ನೇ ತರಗತಿ ಅನುತ್ತೀರ್ಣ ಆಗುವ ವಿದ್ಯಾರ್ಥಿಗಳಿಗೆ ಸರ್ಕಾರಿ ಶಾಲೆಗಳಲ್ಲಿ 10 ನೇ ತರಗತಿ ಪುನರಾವರ್ತಿಸುವ ಕುರಿತು ವಿದ್ಯಾರ್ಥಿಗಳನ್ನು ಮರಳಿ ಶಾಲೆಗೆ ಕರೆತಂದು ಶಿಕ್ಷಣವನ್ನು ಮುಂದುವರೆಸುವಂತೆ ಹಾಗೂ ಶಾಲೆ ಬಿಡದಂತೆ ಕ್ರಮವಹಿಸುವ ಬಗ್ಗೆ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ.

ಅನುತ್ತೀರ್ಣರಾದ ವಿದ್ಯಾರ್ಥಿಗಳು ಶಾಲೆಗಳಲ್ಲಿ ಮರು ದಾಖಲಾತಿ ಪಡೆದಲ್ಲಿ ಇತರೆ ವಿದ್ಯಾರ್ಥಿಗಳಂತೆ ಶಾಲೆಯಲ್ಲಿ ಪೂರ್ಣಾವಧಿ ಎಲ್ಲಾ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಮತ್ತು ಎಲ್ಲಾ ವಿಷಯದ ತರಗತಿಗೆ ಪೂರ್ಣಾವಧಿ ಹಾಜರಾಗಬೇಕು. ಈ ರೀತಿ ಪೂರ್ಣಾವಧಿ ಅಧ್ಯಯನ ಮಾಡಿ ಹಿಂದಿನ ವರ್ಷ ಅನುತ್ತೀರ್ಣರಾದ ವಿಷಯಗಳಲ್ಲಿ ಆ ವರ್ಷದ ಪರೀಕ್ಷೆ ಬರೆಯಬೇಕು. ಮರು ದಾಖಲಾತಿ ಪಡೆದ ವಿದ್ಯಾರ್ಥಿಗಳಿಗೆ ವಿಶೇಷ ಕಾಳಜಿಯನ್ನು ನೀಡಿ, ಅವರಲ್ಲಿ ಧನಾತ್ಮಕ ಮನೋಭಾವನೆ ಉಂಟುಮಾಡಲು ವಿವಿಧ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುವುದು.

ಮರು ದಾಖಲಾತಿ ಪಡೆದ ಅನುತ್ತೀರ್ಣ ವಿದ್ಯಾರ್ಥಿಗಳಿಗೆ ಆದ್ಯತೆಯ ಮೇರೆಗೆ ಪ್ರೋತ್ಸಾಹಿಸಿ, ಶಾಲಾ ಸಿಬ್ಬಂದಿ ವರ್ಗದವರು ಉತ್ತಮ ಸಾಧನೆ ಮಾಡುವಂತೆ ಮಕ್ಕಳಿಗೆ ಮನವರಿಕೆ ಮಾಡಿ ಕೊಡುವರು. ವಿದ್ಯಾರ್ಥಿಗಳಿಗೆ ಆಯಾ ವಿಷಯಗಳಲ್ಲಿ ಹಮ್ಮಿಕೊಳ್ಳುವ ವಿಶೇಷ ತರಗತಿಗಳಲ್ಲಿ ಸೇರಿಸಿ ಕಲಿಕೆಯಲ್ಲಿ ಸುಧಾರಣೆಯಾಗುವಂತೆ ಗಮನಹರಿಸಲಾಗುವುದು ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share with friends

Related Post

Leave a Reply

Your email address will not be published.