ತಾಯಿ ಹೃದಯ… ತಾಯಿಯ ಸ್ಥಾನವನ್ನು ಯಾರೂ ತುಂಬಲು ಸಾಧ್ಯವಿಲ್ಲ. ಅಂಥ ತಾಯಿಯ ವೀಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ತಾಯಿಯ ಹತಾಶಾ ಭಾವನೆಯನ್ನು ಕಂಡು ರೈಲ್ವೆ ಸಿಬ್ಬಂದಿಯ ತ್ವರಿತ ಆಲೋಚನೆಯಿಂದಾಗಿ ಕೂಡಲೇ ಪರಿಹಾರವೂ ಸಿಕ್ಕಿದ್ದು, ವೀಡಿಯೋ ನೋಡಿದ ನೆಟ್ಟಿಗರು ಕೂಡ ನಿಟ್ಟುಸಿರು ಬಿಟ್ಟಿದ್ದಾರೆ.ತಾಯಿಯೊಬ್ಬಳು ತನ್ನ ಮಗುವಿನೊಂದಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದಳು. ಈ ವೇಳೆ ಹಸಿವಾಗಿ ಮಗು ಜೋರಾಗಿ ಅಳುತ್ತಿತ್ತು. ಹೀಗಾಗಿ ಆಕೆ ಮಗುವಿಗೆ ಹಾಲು ಖರೀದಿಸಲೆಂದು ಮುಂದಿನ ರೈಲು ನಿಲ್ದಾಣದಲ್ಲಿ ಇಳಿದಳು. ಅಂತೆಯೇ ಹಾಲು ಕೊಂಡುಕೊಳ್ಳಲು ಹೋದಾಗ ಇತ್ತ ರೈಲು ಚಲಿಸಿದೆ. ರೈಲು ಚಲಿಸುತ್ತಿರುವುದನ್ನು ಕಂಡ ಮಹಿಳೆ ಪ್ಲಾಟ್‌ಫಾರ್ಮ್‌ಗೆ ಓಡಿ ಬಂದಿದ್ದಾರೆ. ಆದರೆ ಅದಾಗಲೇ ರೈಲು ಹೊರಟಿದ್ದು, ಮಗು ರೈಲಿನಲ್ಲಿತ್ತು. ಹೀಗಾಗಿ ಮಹಿಳೆ ಅಳಲು ಪ್ರಾರಂಭಿಸಿದ್ದಾಳೆ. ಇದನ್ನು ನೋಡಿ ಎಲ್ಲರೂ ಭಾವುಕರಾದರು. ಈ ಘಟನೆಯ ವಿಡಿಯೋ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ಮಹಿಳೆ ತನ್ನ ಸಮಸ್ಯೆಗಳನ್ನು ಅಕ್ಕಪಕ್ಕದಲ್ಲಿ ನಿಂತಿದ್ದ ಜನರ ಬಳಿ ಹೇಳಿಕೊಳ್ಳುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಅವಳು ಹೋಗುತ್ತಿರುವ ರೈಲಿನ ಕಡೆಗೆ ನೋಡುತ್ತಿದ್ದಳು ಮತ್ತು ತನ್ನ ಮಗು ರೈಲಿನಲ್ಲಿದೆ ಎಂದು ಕೈಯಿಂದ ಸನ್ನೆ ಮಾಡುತ್ತಿದ್ದಳು. ರೈಲಿನಲ್ಲಿದ್ದವರೂ ಆ ಮಹಿಳೆಯನ್ನೇ ನೋಡುತ್ತಿದ್ದರು. ಕೆಲ ಸಮಯದ ಬಳಿಕ ರೈಲು ಹಠಾತ್ತನೆ ನಿಂತಿದೆ. ಮಹಿಳೆ ಒಬ್ಬಂಟಿಯಾಗಿರುವುದನ್ನು ಮತ್ತು ಆಕೆಯ ಮಗುವನ್ನು ರೈಲಿನಲ್ಲಿ ಬಿಟ್ಟು ಹೋಗಿರುವುದನ್ನು ಸಿಬ್ಬಂದಿ ಗಮನಿಸಿದ್ದಾರೆ. ಆ ಸಮಯದಲ್ಲಿ ರೈಲು ಹೆಚ್ಚು ವೇಗವಾಗಿ ಹೋಗದ ಕಾರಣ ಸಿಬ್ಬಂದಿಗೆ ರೈಲನ್ನು ನಿಲ್ಲಿಸಲು ಸಾಧ್ಯವಾಯಿತು. ಕೂಡಲೇ ಮಹಿಳೆ ಓಡಿಹೋಗಿ ರೈಲು ಹತ್ತಿದ್ದಾರೆ.ಈ ವಿಡಿಯೋ ಯಾವಾಗ ಮತ್ತು ಎಲ್ಲಿಂದ ಬಂದಿದೆ ಎಂಬುದು ಸ್ಪಷ್ಟವಾಗಿಲ್ಲ. ಆದರೆ ವೀಡಿಯೋ ನೋಡಿದ ನಂತರ ಜನ ಪ್ರತಿಕ್ರಿಯಿಸುತ್ತಿದ್ದಾರೆ. ಒಬ್ಬ ಬಳಕೆದಾರರೊಬ್ಬರು ಹಾಲು ತರಲು ತಂದೆ ರೈಲಿನಿಂದ ಇಳಿಯಬೇಕಿತ್ತು ಎಂದು ಬರೆದಿದ್ದಾರೆ. ಇನ್ನೊಬ್ಬರು ತಾಯಿಯೇ ಮಹಾನ್ ಯೋಧ. ಆಕೆಯ ಸ್ಥಾನವನ್ನು ಯಾರೂ ತುಂಬಲು ಸಾಧ್ಯವಿಲ್ಲ ಎಂದಿದ್ದಾರೆ. ಅನೇಕರು ಮಾನವೀಯತೆ ಇನ್ನೂ ಜೀವಂತವಾಗಿದೆ ಎಂದು ಬರೆದಿದ್ದಾರೆ. ಒಟ್ಟಾರೆ ಸಿಬ್ಬಂದಿಯ ತಕ್ಷಣದ ಕ್ರಮಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.