ವಕ್ಫ್ ಬೋರ್ಡ್ ವಿವಿಧ ಭಾಗಗಳಲ್ಲಿ ರೈತರಿಗೆ ನೋಟಿಸ್ ಕೊಟ್ಟಿರುವ ವಿಚಾರ ವಿವಾದಕ್ಕೆ ಕಾರಣವಾಗಿದೆ. ಈ ವಿಚಾರ ಈಗಾಗಲೇ ರಾಜಕೀಯ ಸ್ವರೂಪ ಪಡೆದುಕೊಂಡಿದ್ದು ಬಿಜೆಪಿ-ಕಾಂಗ್ರೆಸ್ ನಡುವೆ ವಾಗ್ವಾದ ನಡೆಯುತ್ತಿದೆ. ರೈತರ ಒಡೆತನದ ಭೂಮಿಗಳ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿದ್ದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.ವ್ಯಾಪಕ ಆಕ್ರೋಶದ ಬಳಿಕ ಎಚ್ಚೆತ್ತಿರುವ ಸಿಎಂ ಸಿದ್ದರಾಮಯ್ಯ ಇದೀಗ ವಕ್ಫ್ ಬೋರ್ಡ್ ಆಸ್ತಿ ವಿಚಾರವಾಗಿ ರೈತರಿಗೆ ನೋಟಿಸ್ ಕೊಡಬೇಡಿ ಎಂದು ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ.ಸಿಎಂ ಸಿದ್ದರಾಮಯ್ಯ ಜಿಲ್ಲಾಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದು, ಈಗ ಕೊಟ್ಟಿರುವ ನೋಟಿಸ್‌ಗಳನ್ನು ವಾಪಸ್ ಪಡೆಯುವಂತೆ ಹೇಳಲಾಗಿದ್ದು, ತುಮಕೂರು ಜಿಲ್ಲೆಯಲ್ಲಿ ವಕ್ಫ್ ಬೋರ್ಡ್‌ನಿಂದ ಯಾರಿಗೂ ನೋಟಿಸ್ ಕೊಟ್ಟಿಲ್ಲ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ.ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಜಿ. ಪರಮೇಶ್ವರ್, ವಕ್ಫ್ ವಿವಾದ ಇಲ್ಲಿಗೆ ಮುಗಿದ ಅಧ್ಯಾಯ. ಮುಂದೆ ಇನ್ನು ಯಾವ ರೀತಿ ಬೆಳವಣಿಗೆ ನಡೆಯುತ್ತದೆ ಗೊತ್ತಿಲ್ಲ, ಕಂದಾಯ ಇಲಾಖೆಯಲ್ಲಿನ ದಾಖಲಾತಿ ಹಾಗೂ ವಕ್ಫ್ ದಾಖಲಾತಿ ಒಂದೇ ರೀತಿ ಇದ್ದರೆ ಮಾತ್ರ ಗೊಂದಲ ಉಂಟಾಗುವುದಿಲ್ಲ, ಕಂದಾಯ ದಾಖಲಾತಿಯೇ ಮುಖ್ಯವಾಗುತ್ತದೆ, ಅದರಲ್ಲಿ ಏನಿದೆ ಅದರಂತೆ ದಾಖಲಾಗುತ್ತದೆ ಎಂದರು.