ನಕಲಿ ಕಾಲ್‌ ಸೆಂಟರ್‌ ತೆರೆದು ಜನರಿಗೆ ಮೋಸ ಮಾಡುತಿದ್ದ ಖದೀಮರ ಬಂಧನ

ಬೆಂಗಳೂರು: ಷೇರು ಪೇಟೆಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಗಳಿಸಬಹುದು ಎಂದು ಗ್ರಾಹಕರಿಗೆ ಕರೆ ಮಾಡುತ್ತಿದ್ದ ನಕಲಿ ಕಾಲ್ ಸೆಂಟರ್ ಮೇಲೆ ಹುಳಿಮಾವು ಪೊಲೀಸರು ಶುಕ್ರವಾರ ದಾಳಿ ನಡೆಸಿ, ಇಬ್ಬರನ್ನು ಬಂಧಿಸಿದ್ದಾರೆ. ಅಲ್ಲದೆ ಖದೀಮರು ನೇಮಕ ಮಾಡಿಕೊಂಡಿದ್ದ 15 ಜನರನ್ನು ವಶಕ್ಕೆ ಪಡೆದಿದ್ದಾರೆ.

ಒಂದು ವರ್ಷದ ಹಿಂದೆ ತೆರೆಯಲಾಗಿದ್ದ ಈ ಕಾಲ್ ಸೆಂಟರ್‌ ನೋಂದಣಿ ಆಗಿಲ್ಲ ಮತ್ತು ಯಾವುದೇ ಪರವಾನಗಿ ಹೊಂದಿರಲಿಲ್ಲ. ಇಲ್ಲಿ ಏಳು ಮಂದಿ ಯುವತಿಯರು ಹಾಗೂ ಎಂಟು ಜನ ಯುವಕರು ಇಲ್ಲಿ ಕೆಲಸ ಮಾಡುತ್ತಿದ್ದು, ಗ್ರಾಹಕರಿಗೆ ಕರೆ ಮಾಡಿ ಷೇರು ಪೇಟೆಯಲ್ಲಿ ಹೂಡಿಕೆ ಮಾಡುವಂತೆ ಒತ್ತಾಯಿಸುತಿದ್ದರು ಎಂದು ಆರೋಪಿಸಲಾಗಿದೆ. ಇವರ ಮಾತಿಗೆ ಮರುಳಾಗಿ ಹೂಡಿಕೆ ಮಾಡಿದವರಿಗೆ ಇವರೇ ನಕಲಿಯಾಗಿ ಸೃಷ್ಟಿಸಿದ ಆಪ್‌ ನಲ್ಲಿ ಷೇರು ಹೂಡಿಕೆ ಅದಂತೆ ತೋರಿಸಿ ಹಣ ಹಿಂಪಡೆಯಲು ಹೋದಾಗ ಅಗುತ್ತಿರಲಿಲ್ಲ. ಅಲ್ಲದೆ ವಾಟ್ಸಾಪ್‌ ಗ್ರೂಪ್‌ ಕ್ರಿಯೇಟ್‌ ಮಾಡಿಕೊಂಡು ಇವರ ನೌಕರರೇ ನನಗೆ ಒಂದು ಲಕ್ಷ ಬಂತು, ನನಗೆ 25 ಸಾವಿರ ಬಂತು ಎಂದು ಮೆಸೇಜ್‌ ಹಾಕುತಿದ್ದರು. ಇದರಿಂದ ಹೂಡಿಕೆದಾರರು ಮರುಳಾಗಿ ಹೂಡಿಕೆ ಮಾಡುತಿದ್ದರು.

ಸಾರ್ವಜನಿಕರ ದೂರಿನ ಮೇರೆಗೆ ಕಾಲ್ ಸೆಂಟರ್ ಮೇಲೆ ದಾಳಿ ನಡೆಸಿ, ಮಾಲೀಕ ಜಿತೇಂದ್ರ ಕುಮಾರ್ ಮತ್ತು ಪಾಲುದಾರ ಚಂದನ್‌ ಕುಮಾರ್ ಅವರನ್ನು ಬಂಧಿಸಿ, ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 15 ನೌಕರರ ವಿಚಾರಣೆ ನಡೆಯುತ್ತಿದೆ. ಈವರೆಗೆ ಎಷ್ಟು ಗ್ರಾಹಕರಿಗೆ ಕರೆ ಮಾಡಲಾಗಿದೆ ಹಾಗೂ ಯಾವ ಕಂಪನಿಗಳ ಷೇರುಗಳ ಮೇಲೆ ಹೂಡಿಕೆ ಮಾಡುವಂತೆ ಗ್ರಾಹಕರಿಗೆ ಕರೆ ಮಾಡಿ ಒತ್ತಡ ಹೇರುತ್ತಿದ್ದರು ಎಂಬ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ

Share with friends

Related Post

Leave a Reply

Your email address will not be published.