ಮಾಜಿ ಸಂಸದ ಹಾಗೂ ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿರುವ ಪ್ರಜ್ವಲ್ ರೇವಣ್ಣಗೆ ಹೈಕೋರ್ಟ್‌ನಿಂದ ಬಿಗ್ ರಿಲೀಫ್ ಸಿಕ್ಕಿದೆ. ಪ್ರಕರಣವನ್ನು ರದ್ದು ಮಾಡುವಂತೆ ಕೋರಿ ಪ್ರಜ್ವಲ್ ರೇವಣ್ಣ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಲಾಗಿದೆ. ಈ ವೇಳೆ ಆರೋಪ ನಿಗದಿ ಮಾಡದಂತೆ ಹೈಕೋರ್ಟ್‌ನ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಏಕಸದಸ್ಯ ಪೀಠ ತಡೆ ನೀಡಿದೆ. ಈ ಮೂಲಕ ಹಲವು ತಿಂಗಳುಗಳ ಬಳಿಕ ಪ್ರಜ್ವಲ್ ರೇವಣ್ಣಗೆ ಈ ಕೇಸ್‌ನಲ್ಲಿತ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದೆ.
ಅತ್ಯಾಚಾರ ಆರೋಪ ಹಾಗೂ ಪೆನ್‌ಡ್ರೈವ್ ಪ್ರಕರಣದಲ್ಲಿ ಜೈಲು ಸೇರಿರುವ ಪ್ರಜ್ವಲ್ ರೇವಣ್ಣ ಅವರಿಗೆ ಇದೀಗ ಹಲವು ತಿಂಗಳುಗಳ ನಂತರ ಸಣ್ಣ ರಿಲೀಫ್‌ವೊಂದು ಸಿಕ್ಕಿದೆ. ಇದೇ ಜನವರಿ 13ಕ್ಕೆ ವಿಚಾರಣಾಧೀನ ಕೋರ್ಟ್‌ನಲ್ಲಿ ಆರೋಪ ನಿಗದಿ ಮಾಡುವುದಕ್ಕೆ ನಿಗದಿ ಆಗಿತ್ತು. ಆದರೆ ಇದೀಗ ಹೈಕೋರ್ಟ್‌ನ ಆದೇಶದಿಂದ ಸಣ್ಣ ರಿಲೀಫ್ ಸಿಕ್ಕಂತೆ ಆಗಿದೆ.
ಲೋಕಸಭೆ ಚುನಾವಣೆಯ ಸಮಯದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿತ್ತು. ಹಲವು ದಿನಗಳ ನಂತರ ಪೊಲೀಸರಿಗೆ ಪ್ರಜ್ವಲ್ ರೇವಣ್ಣ ಶರಣಾಗಿದ್ದರು. ಇದೀಗ ಮುಂದಿನ ಆದೇಶದ ವರೆಗೆ ಪ್ರಜ್ವಲ್ ರೇವಣ್ಣ ಕೇಸ್‌ಗೆ ಸಂಬಂಧಿಸಿದಂತೆ ಆರೋಪ ನಿಗದಿ ಮಾಡದಂತೆ ಹೈಕೋರ್ಟ್ ನಿರ್ದೇಶನ ನೀಡಿದ್ದು, ವಿಚಾರಣೆಯನ್ನು ಇದೇ ತಿಂಗಳು 16ಕ್ಕೆ ಮುಂದೂಡಲಾಗಿದೆ.
ಪ್ರಜ್ವಲ್ ರೇವಣ್ಣ ಅವರು ತಮ್ಮ ಮೇಲೆ ದಾಖಲಾಗಿರುವ ಅತ್ಯಾಚಾರ ಪ್ರಕರಣ ರದ್ದು ಮಾಡುವಂತೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆದಿದ್ದು, ಪ್ರಜ್ವಲ್ ರೇವಣ್ಣ ವಿರುದ್ಧ ಆರೋಪ ನಿಗದಿ ಮಾಡದಂತ ತಡೆ ನೀಡಿ ಆದೇಶಿಸಲಾಗಿದೆ. ಜನವರಿ 13ರಂದು ವಿಚಾರಣಾಧೀನ ಕೋರ್ಟ್‌ನಲ್ಲಿ ಆರೋಪ ನಿಗದಿ ಆಗುವುದಿತ್ತು. ಈ ಹಿನ್ನೆಲೆಯಲ್ಲಿ ಆರೋಪ ನಿಗದಿ ಪ್ರಕ್ರಿಯೆ ತಾತ್ಕಾಲಿಕವಾಗಿ ಸ್ಥಗಿತವಾದಂತಾಗಿದೆ.
ಪ್ರಜ್ವಲ್ ರೇವಣ್ಣ ಪ್ರಕರಣ ದೇಶದಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿತ್ತು. ಹಾಸನದಲ್ಲಿ ಪೆನ್‌ಡ್ರೈವ್‌ಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದಿದ್ದು ಸೇರಿದಂತೆ ಅಶ್ಲೀಲ ವಿಡಿಯೋಗಳ ಬಗ್ಗೆ ಭಾರೀ ಚರ್ಚೆಯಾಗಿತ್ತು. ಸಂತ್ರಸ್ತೆಯರ ರಕ್ಷಣೆಗಾಗಿ ರಾಜ್ಯ ಸರ್ಕಾರವು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿತ್ತು. ಅಲ್ಲದೆ ಈ ಪ್ರಕರಣವನ್ನು ತನಿಖೆ ಮಾಡುವುದಕ್ಕೆ ಎಸ್‌ಐಟಿಯನ್ನು ಸಹ ರಚಿಸಲಾಗಿತ್ತು.ಇದೀಗ ಆರೋಪ ನಿಗದಿ ಮಾಡುವ ವಿಚಾರದಲ್ಲಿ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದೆ.
ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದ್ದ ಪ್ರಕರಣ: ಈ ಪ್ರಕರಣವು ರಾಜ್ಯದಲ್ಲಿ ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿತ್ತು. ಜೆಡಿಎಸ್ , ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ನಡುವೆ ಭಾರೀ ವಾಕ್ಸಮರಕ್ಕೆ ಕಾರಣವಾಗಿತ್ತು. ರಾಜಕೀಯವಾಗಿ ಜೆಡಿಎಸ್‌ಗೆ ಈ ಪ್ರಕರಣದಿಂದ ಹಾಸನದಲ್ಲಿ ಭಾರೀ ಹಿನ್ನಡೆ ಹಾಗೂ ಮುಜುಗರವೂ ಆಗಿತ್ತು.ಭವಾನಿ ರೇವಣ್ಣ ಕೇಸ್ ವಿಚಾರಣೆ: ಇನ್ನು ಇದೇ ಸಂದರ್ಭದಲ್ಲಿ ಪ್ರಜ್ವಲ್ ರೇವಣ್ಣ ಕೇಸ್‌ಗೆ ಸಂಬಂಧಿಸಿ ಕೆ.ಆರ್.ನಗರದ ಸಂತ್ರಸ್ತೆಯನ್ನು ಕಿಡ್ನಾಪ್ ಮಾಡಿದ ಕೇಸ್‌ನಲ್ಲಿ ಹೆಸರು ಕೈಬಿಡುವಂತೆ ಭವಾನಿ ರೇವಣ್ಣ ಅವರು ಸಹ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗೆ ಸಂಬಂಧಿಸಿದಂತೆಯೂ ವಾದ – ವಿವಾದ ಮಂಡಿಸಲಾಗಿದೆ. ಮುಂದಿನ ತಿಂಗಳು 17ಕ್ಕೆ ಅರ್ಜಿ ಇತ್ಯರ್ಥಪಡಿಸುವುದಾಗಿ ಕೋರ್ಟ್ ಹೇಳಿದೆ ಎನ್ನಲಾಗಿದೆ.