Browse

Waqf Property: “ವಕ್ಫ್ ಆಸ್ತಿ ಕಬಳಿಕೆ ವಿರುದ್ಧ ಸಿಎಂ ಸಿಬಿಐ, ಎಸ್‌ಐಟಿ ತನಿಖೆ ಮಾಡಿಸಲಿ”

ವಕ್ಫ್ ಆಸ್ತಿ ಕಬಳಿಕೆ ಕುರಿತು ಅನ್ವರ್‌ ಮಾಣಿಪ್ಪಾಡಿ ನೀಡಿರುವ ವರದಿ ಮೇಲೆ ಕ್ರಮ ತೆಗೆದುಕೊಳ್ಳಲು ಮುಖ್ಯಮಂತ್ರಿಗಳು ತತ್‌ಕ್ಷಣ ಎಸ್‌ಐಟಿ ಅಥವಾ ಸಿಬಿಐ ತನಿಖೆ ಮಾಡಿಸಬೇಕೆಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.

ಈ ಕುರಿತು ಸರಣಿ ಟ್ವೀಟ್‌ ಮಾಡಿರುವ ಬೊಮ್ಮಾಯಿ, ವಕ್ಫ್ ಸಚಿವ ಜಮೀರ್‌ ಅಹಮದ್‌ ಅವರು ನಾನು ವಕ್ಫ್ ಬೋರ್ಡ್‌ ಸಮಾರಂಭದಲ್ಲಿ ಮಾತನಾಡಿರುವ ಹಳೆಯ ವೀಡಿಯೊ ಹರಿಯಬಿಟ್ಟು ಅಪಪ್ರಚಾರ ಮಾಡುತ್ತಿದ್ದಾರೆ.

ನಾನು ಯಾವುದೇ ವಕ್ಫ್ ಬೋರ್ಡ್‌ ಸಭೆ ಮಾಡಿಲ್ಲ. ವಕ್ಫ್ ಬೋರ್ಡ್‌ ಕಟ್ಟಡ ಉದ್ಘಾಟನೆ ಸಮಾರಂಭದಲ್ಲಿ ಅನ್ವರ್‌ ಮಾಣಿಪ್ಪಾಡಿ ವರದಿಯಲ್ಲಿರುವಂತೆ ವಕ್ಫ್ ಆಸ್ತಿ ಕಬಳಿಸಿರುವ ಕಾಂಗ್ರೆಸ್‌ ನಾಯಕರಿಂದ ವಕ್ಫ್ ಆಸ್ತಿ ವಶಪಡಿಸಿಕೊಳ್ಳಬೇಕೆಂದು ಹೇಳಿರುವುದನ್ನು ತಿರುಚಿದ್ದಾರೆ. ಆ ಸಂದರ್ಭದಲ್ಲಿ ರೈತರ ಜಮೀನಿಗೆ ನೋಟಿಸ್‌ ಕೊಡುವುದಾಗಲಿ, ಪಹಣಿ ತಿದ್ದುಪಡಿ ಮಾಡುವುದಾಗಲಿ ಯಾವೂದೂ ವಿಷಯ ನಮ್ಮ ಮುಂದೆ ಪ್ರಸ್ತಾಪವಾಗಿರಲಿಲ್ಲ ಎಂದು ತಿಳಿಸಿದ್ದಾರೆ.

ಗೆಜೆಟ್‌ ನೊಟಿಫಿಕೇಶನ್‌ ರದ್ದು ಮಾಡಿಸಿದ್ದರಾಮಯ್ಯ ಅವರು ರೈತರಿಗೆ ಕೊಟ್ಟಿರುವ ನೋಟಿಸ್‌ ವಾಪಸ್‌ ಪಡೆಯುವಂತೆ ಹೇಳಿರುವುದು ಕಣ್ಣೊರೆಸುವ ತಂತ್ರ. ಈಗ ನೋಟಿಸ್‌ ವಾಪಸ್‌ ಪಡೆದು ಚುನಾವಣೆ ಮುಗಿದ ಅನಂತರ ಮತ್ತೆ ನೋಟಿಸ್‌ ಕೊಡುವುದಿಲ್ಲ ಎನ್ನುವುದು ಏನು ಗ್ಯಾರಂಟಿ? ಮುಖ್ಯಮಂತ್ರಿಗಳಿಗೆ ರೈತರ ಬಗ್ಗೆ ನಿಜವಾಗಲೂ ಕಾಳಜಿ, ಗೌರವ ಇದ್ದರೆ ರೈತರ ಆಸ್ತಿ ಉಳಿಸಬೇಕೆಂದು ಮನಸ್ಸಿದ್ದರೆ ಕೂಡಲೇ ವಕ್ಫ್ ಗೆಜೆಟ್‌ ನೊಟಿಫಿಕೇಶನ್‌ ರದ್ದು ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಸಚಿವ ಜಮೀರ್‌ ಸೂಪರ್‌ ಸಿಎಂ ರೀತಿ ವರ್ತನೆ: ರೇಣುಕಾಚಾರ್ಯದಾವಣಗೆರೆ: ವಕ್ಫ್ ಸಚಿವ ಜಮೀರ್‌ ಅಹ್ಮದ್‌ ಸೂಪರ್‌ ಸಿಎಂ ರೀತಿ ವರ್ತಿಸುತ್ತಿದ್ದಾರೆ. ಅವರ ಮೌಖೀಕ ಆದೇಶದಂತೆಯೇ ಜಮೀನು, ಮಠ-ಮಾನ್ಯಗಳು, ದೇವಸ್ಥಾನದ ಆಸ್ತಿಗಳನ್ನು ವಕ್ಫ್ ಆಸ್ತಿ ಎಂಬುದಾಗಿ ಪಹಣಿಯ ಕಾಲಂ 11ರಲ್ಲಿ ನಮೂದಿಸುವ ಕೆಲಸ ಮಾಡಲಾಗುತ್ತಿದೆ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಆರೋಪಿಸಿದರು.ಸುದ್ದಿಗಾರರ ಜತೆ ಮಾತನಾಡಿ, ಜಮೀರ್‌ ಅವರನ್ನು ನಿಯಂತ್ರಣ ಮಾಡದೇ ಹೋದರೆ ಮುಂದಿನ ದಿನಗಳಲ್ಲಿ ಎಲ್ಲ ಸರಕಾರಿ ಆಸ್ತಿ, ಕಚೇರಿ ಮಾತ್ರವಲ್ಲದೆ ವಿಧಾನಸೌಧದ ಮುಂದೆಯೂ ವಕ್ಫ್ ಆಸ್ತಿ ಎಂಬ ಬೋರ್ಡ್‌ ಹಾಕಬಹುದು. ಆದರೆ ಬಿಜೆಪಿ ಅದಕ್ಕೆ ಅವಕಾಶ ನೀಡುವುದಿಲ್ಲ.

ಜಮೀರ್‌ ಒಬ್ಬ ಮತಾಂಧ. ಹಿಂದೂಗಳ ಆಸ್ತಿ ಕಬಳಿಕೆಗೆ ಮುಂದಾಗಿದ್ದಾರೆ. ಅಂತಹ ಯಾವ ಆಟವೂ ನಡೆಯುವುದಿಲ್ಲ. ರಾಜ್ಯ ಸರಕಾರ ಸ್ವಪ್ರೇರಣೆಯಿಂದ ಎಲ್ಲ ವಕ್ಫ್ ಆಸ್ತಿಗಳನ್ನು ವಾಪಸ್‌ ಪಡೆದು ಶಾಲಾ, ಕಾಲೇಜು, ಆಸ್ಪತ್ರೆಗಳ ನಿರ್ಮಾಣಕ್ಕೆ ನೀಡಬೇಕು ಎಂದು ಹೇಳಿದರು.

Share with friends