IPL 2023: ರಾಯಲ್ಸ್ ವಿರುದ್ಧ ಶೈನ್ ಆಗದ ಸನ್ರೈಸರ್ಸ್; 72 ರನ್ ಸೋಲು safgroupPosted on April 2, 2023 Saftv No Comments ಹೈದರಾಬಾದ್: ಉತ್ಕೃಷ್ಟ ಮಟ್ಟದ ಬ್ಯಾಟಿಂಗ್ ಮತ್ತು ಬೌಲಿಂಗ್ ಪ್ರದರ್ಶನ ತೋರಿದ ರಾಜಸ್ಥಾನ್ ರಾಯಲ್ಸ್(Rajasthan Royals) ತಂಡ 16ನೇ ಆವೃತ್ತಿಯ ಐಪಿಎಲ್ನ(IPL 2023) 4ನೇ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್(Sunrisers Hyderabad) ವಿರುದ್ಧ ಭರ್ಜರಿ 72 ರನ್ಗಳ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ ಆರ್ಆರ್ ತಂಡ ಟೂರ್ನಿಯಲ್ಲಿ ಶುಭಾರಂಭ ಕಂಡಿದೆ.ಹೈದರಾಬಾದ್ನ ರಾಜೀವ್ ಗಾಂಧಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಭಾನುವಾರದ ಐಪಿಎಲ್ನ ಡಬಲ್ ಹೆಡರ್ನ ಮೊದಲ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ರಾಜಸ್ಥಾನ್ ರಾಯಲ್ಸ್ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 203 ರನ್ ಬಾರಿಸಿತು. ಜವಾಬಿತ್ತ ಸನ್ರೈಸರ್ಸ್ ಹೈದರಾಬಾದ್ ತನ್ನ ಪಾಲಿನ ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 131 ರನ್ ಗಳಿಸಿ ಹೀನಾಯ ಸೋಲು ಕಂಡಿತು. ಈ ಪಂದ್ಯದಲ್ಲಿ ರಾಜಸ್ಥಾನ್ ಮತ್ತು ಹೈದರಾಬಾದ್ ತಂಡದ ಆಟಗಾರರು ಪಂದ್ಯವನ್ನಾಡುವ ಮುನ್ನ ಇಂದು ನಿಧನರಾದ ಭಾರತದ ಮಾಜಿ ಕ್ರಿಕೆಟರ್ ಸಲೀಂ ದುರಾನಿ ಅವರಿಗೆ ಸಂತಾಪ ಸೂಚಿಸಿದರು.ದೊಡ್ಡ ಮೊತ್ತವನ್ನು ಬೆನ್ನಟ್ಟಿದ ಸನ್ರೈಸರ್ಸ್ ಹೈದರಾಬಾದ್ ಆರಂಭದಲ್ಲೇ ಕುಸಿತ ಕಂಡಿತು. ತಂಡದ ಖಾತೆ ತರೆಯುವ ಮುನ್ನವೇ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಅಭಿಷೇಕ್ ಶರ್ಮಾ ಅವರನ್ನು ಟ್ರೆಂಟ್ ಬೌಲ್ಟ್ ಮೊದಲ ಓವರ್ನಲ್ಲಿ ಕ್ಲೀನ್ ಬೌಲ್ಡ್ ಮಾಡಿದರೆ, ಮುಂದಿನ ಓವರ್ನಲ್ಲಿ ಜಾಸನ್ ಹೋಲ್ಡರ್ ರಾಹುಲ್ ತ್ರಿಪಾಠಿ ಅವರನ್ನು ಶೂನ್ಯಕ್ಕೆ ಔಟ್ ಮಾಡಿದರು. ಕನ್ನಡಿಗ ಮಾಯಾಂಕ್ ಅಗರ್ವಾಲ್ 27, ಅಬ್ದುಲ್ ಸಮದ್ ಅಜೇಯ 32 ರನ್ ಗಳಿಸಿದ್ದು ಬಿಟ್ಟರೆ ಉಳಿದ ಯಾವ ಆಟಗಾರರು ದೊಡ್ಡ ಮೊತ್ತ ಗಳಿಸುವಲ್ಲಿ ಯಶಸ್ಸು ಕಾಣಲಿಲ್ಲ. ಆರ್ಆರ್ ಬೌಲಿಂಗ್ ದಾಳಿಗೆ ಕೇವಲ ಪೆವಿಲಿಯನ್ ಪರೇಡ್ ಕಂಡು ಬಂತು. ಪದಾರ್ಪಣ ಪಂದ್ಯವನ್ನಾಡಿದ ಇಂಗ್ಲೆಂಡ್ ತಂಡದ ಡೇಂಜರಸ್ ಬ್ಯಾಟರ್ ಹ್ಯಾರಿ ಬ್ರೂಕ್ಸ್ ಕೇವಲ 13 ರನ್ಗಳಿಸಿ ನಿರಾಸೆ ಮೂಡಿಸಿದರು. ರಾಜಸ್ಥಾನ್ ಪರ ಬೌಲಿಂಗ್ನಲ್ಲಿ ಯಜುವೇಂದ್ರ ಚಾಹಲ್ ನಾಲ್ಕು ಓವರ್ ಬೌಲಿಂಗ್ ನಡೆಸಿ ಕೇವಲ 17 ರನ್ ವೆಚ್ಚದಲ್ಲಿ 4 ವಿಕೆಟ್ ಕಿತ್ತು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಉಳಿದಂತೆ ಟ್ರೆಂಟ್ ಬೌಲ್ಟ್ 24 ರನ್ಗೆ 2 ವಿಕೆಟ್ ಉರುಳಿಸಿದರು. ಅಂತಿಮ ಹಂತದ 2 ಓವರ್ಗಳಲ್ಲಿ ಸಮದ್ ಸಿಡಿದು ನಿಂತ ಪರಿಣಾಮ ತಂಡ ನೂರರ ಗಡಿ ದಾಟಿ ಸಮಾಧಾನ ಪಟ್ಟಿತು. ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ ರಾಜಸ್ಥಾನ್ ರಾಯಲ್ಸ್ ಪರ ಜಾಸ್ ಬಟ್ಲರ್(54), ಯಶಸ್ವಿ ಜೈಸ್ವಾಲ್(54) ಮತ್ತು ನಾಯಕ ಸಂಜು ಸ್ಯಾಮ್ಸನ್(55) ಅವರು ಆಕರ್ಷಕ ಅರ್ಧಶತಕ ಬಾರಿಸಿ ಮಿಂಚಿದ್ದರು. ಸ್ಫೋಟಕ ಬ್ಯಾಟಿಂಗ್ ನಡೆಸಿದ ಬಟ್ಲರ್, ಸಂಜು, ಜೈಸ್ವಾಲ್ ಮೊದಲ ಓವರ್ನಲ್ಲಿ ರಕ್ಷಣಾತ್ಮ ಆಟಕ್ಕೆ ಒತ್ತು ನೀಡಿದ ಯಶಸ್ವಿ ಜೈಸ್ವಾಲ್(Yashasvi Jaiswal) ಮತ್ತು ಜಾಸ್ ಬಟ್ಲರ್ (Jos Buttler) ಆ ಬಳಿಕದ ಓವರ್ನಲ್ಲಿ ಸಿಡಿಯಲು ಆರಂಭಿಸಿದರು. ಅದರಲ್ಲೂ ಜಾಸ್ ಬಟ್ಟರ್ ಅವರ ಸ್ಫೋಟಕ ಬ್ಯಾಟಿಂಗ್ ಮುಂದೆ ಹೈದರಾಬಾದ್ ಬೌಲಿಂಗ್ ಸಂಪೂರ್ಣವಾಗಿ ಹಳಿ ತಪ್ಪಿತು. 6 ಓವರ್ಗಳ ಪವರ್ ಪ್ಲೇ ಮುಕ್ತಾಯದ ವೇಳೆಗೆ ತಂಡ 85 ರನ್ ಕಲೆಹಾಕಿತು. ಮೈದಾನದ ಅಷ್ಟ ದಿಕ್ಕುಗಳಿಗೂ ಬೌಂಡರಿ, ಸಿಕ್ಸರ್ ಬಾರಿಸಿದ ಜಾಸ್ ಬಟ್ಲರ್ ಅರ್ಧಶತಕ ಪೂರೈಸಿದರು.ಜಿದ್ದಿಗೆ ಬಿದ್ದವರಂತೆ ಬ್ಯಾಟ್ ಬೀಸುತ್ತಿದ್ದ ಈ ಜೋಡಿಯನ್ನು ಫಜಲ್ಹಕ್ ಫಾರೂಕಿ(Fazalhaq Farooqi) ಬೇರ್ಪಡಿಸುವಲ್ಲಿ ಯಶಸ್ವಿಯಾದರು. 54 ರನ್ ಗಳಿಸಿದ ಬಟ್ಲರ್ ಅವರ ವಿಕೆಟ್ ಕಿತ್ತರು. 22 ಎಸೆತ ಎದುರಿಸಿದ ಬಟ್ಲರ್ 7 ಬೌಂಡರಿ ಮತ್ತು ಮೂರು ಬೌಂಡರಿ ಬಾರಿಸಿದರು.ಈ ವಿಕೆಟ್ ಪತನದ ಬಳಿಕ ಆಡಲಿಳಿದ ನಾಯಕ ಸಂಜು ಸ್ಯಾಮ್ಸನ್ ಕೂಡ ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ಗೆ ಮುಂದಾದರು. ಬಟ್ಲರ್ ಅವರ ಮುಂದಿನ ಆಟವನ್ನು ಸಂಜು ಮುಂದುವರಿಸಿದರು. 10 ಓವರ್ ಆಗುವ ಮುನ್ನವೇ ತಂಡದ ಮೊತ್ತ ನೂರರ ಗಡಿ ದಾಟಿತ್ತು. ಒಂದು ಹಂತದಲ್ಲಿ ರಾಜಸ್ಥಾನ್ ತಂಡ ಐಪಿಎಲ್ನಲ್ಲಿ ಗರಿಷ್ಠ ಮೊತ್ತ ದಾಖಲಿಸಿ ಇತಿಹಾಸ ನಿರ್ಮಿಸುತ್ತದೆ ಎಂಬ ನಿರೀಕ್ಷೆಯೊಂದು ಹುಟ್ಟಿಕೊಂಡಿತು. ಆದರೆ ಜೈಸ್ವಾಲ್ ವಿಕೆಟ್ ಪತನದ ಬಳಿಕ ರನ್ ವೇಗ ಕುಂಟಿತಗೊಂಡಿತು. ಇಲ್ಲಿಂದ ಮೇಲೆ ಹೈದರಾಬಾದ್ ಮತ್ತೆ ಪಂದ್ಯದಲ್ಲಿ ಹಿಡಿತ ಸಾಧಿಸಿತು. ಜೈಸ್ವಾಲ್ ಕೂಡ ಬಟ್ಲರ್ ಅವರಂತೆ 54 ರನ್ಗೆ ವಿಕೆಟ್ ಒಪ್ಪಿಸಿದರು. ಈ ವಿಕೆಟ್ ಕೂಡ ಫಜಲ್ಹಕ್ ಫಾರೂಕಿ ಪಾಲಾಯಿತು. ಜೈಸ್ವಾಲ್ ತಮ್ಮ ಅರ್ಧಶತಕದ ಇನಿಂಗ್ಸ್ನಲ್ಲಿ 9 ಬೌಂಡರಿ ಸಿಡಿಸಿದರು.ಆರ್ಸಿಬಿಯ ಮಾಜಿ ಆಟಗಾರ ದೇವದತ್ತ ಪಡಿಕ್ಕಲ್ 5 ಎಸೆತಗಳಿಂದ ಕೇವಲ 2 ರನ್ ಗಳಿಸಿ ಉಮ್ರಾನ್ ಮಲಿಕ್ ಬೌಲಿಂಗ್ನಲ್ಲಿ ಕ್ಲೀನ್ ಬೌಲ್ಡ್ ಆದರು. ಇದರ ಬೆನ್ನಲ್ಲೇ ರಿಯಾನ್ ಪರಾಗ್ ಕೂಡ 7 ರನ್ಗೆ ಆಟ ಮುಗಿಸಿದರು. ಆದರೆ ಮತ್ತೊಂದು ಬದಿಯಲ್ಲಿ ಸಂಜು ಸ್ಯಾಮ್ಸನ್ ಮಾತ್ರ ತಮ್ಮ ಬಿರುಸಿ ಬ್ಯಾಟಿಂಗ್ ನಡೆಸುತ್ತಾಲೇ ಸಾಗಿದರು. 28 ಎಸೆತಗಳಲ್ಲಿ ತಮ್ಮ ಅರ್ಧಶತಕವನ್ನು ಪೂರೈಸಿದರು. ಇದೇ ವೇಳೆ ಅವರು ಐಪಿಎಲ್ನ 18ನೇ ಅರ್ಧಶತಕವನ್ನು ಪೂರ್ತಿಗೊಳಿಸಿದರು. ಆದರೆ 55 ರನ್ ಗಳಿಸಿದ್ದ ವೇಳೆ ಬೌಂಡರಿ ಲೈನ್ನಲ್ಲಿ ಅಭಿಷೇಕ್ ಶರ್ಮಾ ಅವರ ಅದ್ಭುತ ಕ್ಯಾಚ್ಗೆ ವಿಕೆಟ್ ಕೈಚೆಲ್ಲಿದರು. ಅಂತಿಮ ಹಂತದಲ್ಲಿ ವಿಂಡೀಸ್ನ ಎಡಗೈ ಆಟಗಾರ ಶಿಮ್ರಾನ್ ಹೆಟ್ಮೈರ್ ಅವರು 16 ಎಸೆಗಳಿಂದ ಅಜೇಯ 22 ರನ್ ಬಾರಿಸಿದ ಪರಿಣಾಮ ತಂಡ 200ರ ಗಡಿ ದಾಟಿತು. ಹೈದರಾಬಾದ್ ಪರ ಟಿ.ನಟರಾಜನ್ ಮತ್ತು ಫಜಲ್ಹಕ್ ಫಾರೂಕಿ ತಲಾ 2 ವಿಕೆಟ್ ಕಿತ್ತು ಮಿಂಚಿದರು.The post IPL 2023: ರಾಯಲ್ಸ್ ವಿರುದ್ಧ ಶೈನ್ ಆಗದ ಸನ್ರೈಸರ್ಸ್; 72 ರನ್ ಸೋಲು first appeared on Vistara News. Post Views: 2 Share with friends