ನಗರದ ಹ್ಯಾಮಿಲ್ಟನ್ ವೃತ್ತದ ಬಳಿಯ ಇಂದಿರಾ ಕ್ಯಾಂಟೀನ್ ಸಮೀಪ ನಡೆದ ಖಾಸಗಿ ಬಸ್ ನಿರ್ವಾಹಕ ರಾಜೇಶ್ ಕೊಲೆ ಪ್ರಕರಣದ ತನಿಖೆ ಚುರುಕುಗೊಂಡಿದೆಮಂಗಳೂರು-ವಿಟ್ಲ ನಡುವೆ ಸಂಚರಿಸುವ ಖಾಸಗಿ ಬಸ್ನಲ್ಲಿ ನಿರ್ವಾಹಕರಾಗಿದ್ದ ರಾಜೇಶ್ (30) ಅವರ ಮೃತದೇಹ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ಸ್ಥಿತಿಯಲ್ಲಿ ಸೋಮವಾರ ಪತ್ತೆಯಾಗಿತ್ತು.ಆರಂಭದಲ್ಲಿ ಅವರು ಎಲ್ಲಿಯವರೆಂದು ಗೊತ್ತಾಗಿರಲಿಲ್ಲ. ಮೃತದೇಹವನ್ನು ಪೊಲೀಸರು ವೆನ್ಲಾಕ್ ಶವಾಗಾರದಲ್ಲಿಟ್ಟಿದ್ದರು. ಬಳಿಕ ಅವರು ಬಜಪೆಯವರೆಂದು ಗೊತ್ತಾಗಿದೆ. ರಾಜೇಶ್ ಅವರಿಗೆ ತಂದೆ, ತಾಯಿ ಇಲ್ಲ. ಸಹೋದರಿ ಮಾತ್ರ ಇದ್ದಾರೆ. ಕುಟುಂಬಸ್ಥರು ಬಂದು ಶವ ಕೊಂಡೊಯ್ದು ಅಂತ್ಯ ಸಂಸ್ಕಾರ ಮಾಡಿದ್ದಾರೆ.ಮಂಗಳೂರಿನಲ್ಲೇ ರೂಮ್ನಲ್ಲಿ ಉಳಿದುಕೊಂಡು ಬಸ್ ನಿರ್ವಾಹಕನ ಕರ್ತವ್ಯಕ್ಕೆ ಬರುತ್ತಿದ್ದರು. ಅವರು ಹಣದ ವ್ಯವಹಾರವನ್ನೂ ಮಾಡುತ್ತಿದ್ದು, ಇದೇ ವಿಚಾರದಲ್ಲಿ ಕೊಲೆ ಮಾಡಲಾಗಿದೆಯೋ ಅಥವಾ ಇನ್ಯಾವುದೋ ಕಾರಣ ಇದೆಯೋ ಎಂಬುದು ಆರೋಪಿಗಳ ಪತ್ತೆಯಿಂದ ಗೊತ್ತಾಗಲಿದೆ.ಸಾಧು ಸ್ವಭಾವದವರಾಗಿದ್ದ ಅವರು ಕೊಲೆಯಾಗಿರುವ ವಿಚಾರ ತಿಳಿದ ಸಹೋದ್ಯೋಗಿಗಳು, ಸ್ನೇಹಿತರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಸ್ಟೇಟ್ಬ್ಯಾಂಕ್ ಪರಿಸರದ ಸಿಸಿ ಕೆಮರಾ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲನೆ ನಡೆಸಿದ್ದು, ಆರೋಪಿಗಳ ಕುರಿತು ಸುಳಿವು ಸಿಕ್ಕಿದೆ ಎನ್ನಲಾಗಿದೆ.